ಕಾರ್ಕಳ: ಚುನಾವಣೆಗಳು ಪ್ರಜಾತಂತ್ರದ ಜೀವಾಳವಾಗಿದ್ದು ಈ ಪ್ರಕ್ರಿಯೆಯಲ್ಲಿ ಭಾಗವಹಿಸುವ ರಾಜಕಾರಣಿ ಸೋಲಲಿ ಅಥವಾ ಗೆಲ್ಲಲಿ ಅತ ಸದಾ ಜನಸೇವೆಗೆ ಬದ್ದನಾಗಿರಬೇಕು, ಇದು ನಿಜವಾದ ರಾಜಧರ್ಮ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಅವರು ಶುಕ್ರವಾರ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ವಿಧಾನ ಪರಿಷತ್ ನೈಋತ್ಯ ಪಧವೀದರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣಾ ಪೂರ್ವತಯಾರಿ ಹಾಗೂ ಕಾರ್ಯಕರ್ತರ ಭೇಟಿ ಕಾರ್ಯಕ್ರಮದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಅಭಿನಂದಿಸಿ ಮಾತನಾಡಿ,ನಮ್ಮ ಪಕ್ಷದ ಜನಪರ ಸಿದ್ಧಾಂತಗಳು, ಈ ಹಿಂದಿನ ಅವಧಿಗಳಲ್ಲಿ ನಾನು ಈ ಕ್ಷೇತ್ರದಲ್ಲಿ ಮಾಡಿದ ಮೂಲಭೂತ ಅಭಿವೃದ್ದಿಯನ್ನೊಳಗೊಂಡ ಆಧ್ಯತಾವಲಯದ ಕೆಲಸಗಳು ಹಾಗೂ ಕಾಯಕರ್ತರ ಪರಿಶ್ರಮ ನನಗೆ ಗೆಲುವು ತರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ ಅವರು ನಮ್ಮ ಯುವ ಕಾರ್ಯಕರ್ತರಲ್ಲಿ ಪಕ್ಷಕ್ಕಾಗಿ ದುಡಿಯುವ ಬದ್ಧತೆ ಇದೆ. ಈ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ಹೊತ್ತು ಅವರು ಪಕ್ಷಕ್ಕಾಗಿ ದುಡಿಯಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಧಾನ ಪರಿಷತ್ತಿನ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಸರಕಾರ ನಡೆಸುತ್ತಿರುವ ನಮ್ಮ ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇದಲ್ಲದೇ ಕೆ.ಕೆ. ಮಂಜುನಾಥ್, ಆಯನೂರು ಮಂಜುನಾಥರಂತಹ ಸಮರ್ಥ ಅಭ್ಯರ್ಥಿಗಳನ್ನು ನೀಡಿದೆ. ಈಗಾಗಲೇ ನಮ್ಮ ಸರಕಾರ ಒಂದು ವರ್ಷ ಪೂರೈಸಿದ್ದು ಈ ಅವಧಿಯ ಜನಪರ ಕೆಲಸಗಳನ್ನು ಮುಂದಿಟ್ಟು ಗೆಲುವು ಸಾಧಿಸುವುದು ದೊಡ್ಡ ಸಮಸ್ಯೆಯೇನಲ್ಲ. ಪಕ್ಷದ ಕಾರ್ಯಕರ್ತರು ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿರುವ ಶಿಕ್ಷಕರು ಮತ್ತು ಪದವೀಧರರನ್ನು ಗುರುತಿಸಿ ಅವರನ್ನು ಮುತಃ ಭೇಟಿಯಾಗಿ ಮತ ಚಲಾವಣಾ ಪ್ರಕ್ರಿಯೆಯ ಮಾಹಿತಿ ನೀಡಬೇಕು ಎಂದು ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕೆಪಿಸಿಸಿ ಹಿಂದುಳಿದ ವರ್ಗದ ಅಧ್ಯಕ್ಷ ಡಿ.ಆರ್ ರಾಜು, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ವಿಧಾನ ಪರಿಷತ್ ಚುನಾವಣೆ ಕಾರ್ಕಳ ಕ್ಷೇತ್ರ ಉಸ್ತುವಾರಿ ಪ್ರೊ. ಸುದೀಪ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ನಿಕಟಪೂರ್ವ ಬ್ಲಾಕ್ ಅಧ್ಯಕ್ಷ ಹಿರಿಯ ನ್ಯಾಯವಾದಿ ಶೇಖರ ಮಡಿವಾಳ, ಜಿಲ್ಲಾ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ, ಕಿಸಾನ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕುಕ್ಕುಂದೂರು ಉದಯ ಶೆಟ್ಟಿ ಎಸ್ಸಿಎಸ್ಟಿ ಘಟಕ ಜಿಲ್ಲಾಧ್ಯಕ್ಷ ಜಯಕುಮಾರ್, ಇಂಟಕ್ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ಜಿಲ್ಲ ಐಟಿ ಸೆಲ್ ಅಧ್ಯಕ್ಷ ರೋಷನ್ ಶೆಟ್ಟಿ, ಬ್ಲಾಕ್ ಮಹಿಳಾಧ್ಯಕ್ಷೆ ಅನಿತಾ ಡಿ’ಸೋಜ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ವಕ್ತಾರ, ಪುರಸಬಾ ಸದಸ್ಯ ಶುಭದಾ ರಾವ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಬ್ಲಾಕ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ತಲಿನೋ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಮತದಾನ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿ ವಂದಿಸಿದರು.