

ಕಾರ್ಕಳ: ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದಲ್ಲಿ ಒಂಟಿ ಮಹಿಳೆಯೊಬ್ಬರು ವಾಸವಿದ್ದ ಮನೆಗೆ ಬಂದ ಅಪರಿಚಿತನೋರ್ವ ಬಂದು ಪರಿಚಯ ಮಾಡಿಕೊಂಡು ಬಳಿಕ ಮಹಿಳೆಗೆ ಹಲ್ಲೆ ನಡೆಸಿ ಅವರ ಮೈಮೇಲೆ ಇದ್ದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಮಂಗಳವಾರ ಸಂಜೆಯ ವೇಳೆಗೆ ನಡೆದಿದೆ.
ಎಳ್ಳಾರೆಯ ಕುಮುದಾ ಶೆಟ್ಟಿ(80ವರ್ಷ) ಅವರು ಮನೆಯ ಅಂಗಳದಲ್ಲಿ ಕುಳಿತಿದ್ದ ವೇಳೆ ಮನೆಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ತಾನು ಕಾರ್ಕಳದ ಸೂಪರ್‌ವೈಸರ್ ಎಂದು ಹೇಳಿ ಮಾತನಾಡಿಸಿ, ಸಮೀಪದಲ್ಲಿ ಬೇರೆ ಮನೆ ಇದೆಯಾ, ಸಿಸಿ ಕ್ಯಾಮರಾ ಇದೆಯಾ ಎಂದೆಲ್ಲ ವಿಚಾರಿಸಿ ಸ್ವಲ್ಪ ಸಮಯ ಅಲ್ಲಿಯೇ ಕುಳಿತಿದ್ದ. ನಂತರ ಏಕಾಏಕಿ ಕುಮುದಾ ಅವರನ್ನು ಕೆಳಕ್ಕೆ ದೂಡಿ ಅವರ ಕತ್ತಿನಲ್ಲಿದ್ದ 25 ಗ್ರಾಂ ತೂಕದ ಚಿನ್ನದ ಚೈನ್ ಎಳೆದುಕೊಂಡು ಪರಾರಿಯಾಗಿದ್ದಾನೆ.
ಕೆಳಕ್ಕೆ ಬಿದ್ದ ಕುಮುದಾ ಅವರು ಗಾಗಯಗೊಂಡಿದ್ದು, ಸ್ವಲ್ಪ ಹೊತ್ತಿನ ಬಳಿಕ ಅಲ್ಲಿಗೆ ಬಂದಿದ್ದ ಸತೀಶ್ ಎಂಬವರು ಕುಮುದಾರನ್ನು ಕಾರ್ಕಳ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


