ಕಾರ್ಕಳ: ತಂದೆಯ ಸ್ವಯಾರ್ಜಿತ ಆಸ್ತಿಯನ್ನು ಬ್ಯಾಂಕಿನಲ್ಲಿ ಅಡಮಾನ ಇರಿಸಿ ಸಾಲ ಪಡೆದ ವಿಚಾರದಲ್ಲಿ ಆಸ್ತಿಯಲ್ಲಿ ಪಾಲುದಾರರು ತನ್ನ ಸಹೋದರ ಹಾಗೂ ಅವರ ಮಕ್ಕಳ ವಿರುದ್ಧ ಸಹಿ ದುರ್ಬಳಕೆ ಆರೋಪ ಮಾಡಿದ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರ್ಲಪಾಡಿ ಗ್ರಾಮದ ಹೆಪ್ಪಳ ನಿವಾಸಿ ಕೃಷ್ಣ ನಾಯಕ್ ಎಂಬವರು ತನ್ನ ಸಹೋದರ ಹಾಗೂ ಅವರ ಮಕ್ಕಳ ವಿರುದ್ಧ ಸಹಿ ಪೋರ್ಜರಿ ಮಾಡಿ ಬ್ಯಾಂಕ್ ಸಾಲ ಪಡೆದ ಕುರಿತು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಕೃಷ್ಣ ನಾಯಕ್ ,ಅಪ್ಪಿ ನಾಯಕ್ ಹಾಗೂ ಇನ್ನೋರ್ವ ಸಹೋದರ ಸೇರಿದಂತೆ ಮೂವರ ಹೆಸರಿನಲ್ಲಿ ಅವರ ತಂದೆಯಿಂದ ಬಂದಿರುವ 16.20 ಎಕರೆ ಜಾಗ ಜಂಟಿ ಖಾತೆಯಲ್ಲಿ ನೋಂದಣಿಯಾಗಿತ್ತು.
ಕಳೆದ 2017ರ ಫೆಬ್ರವರಿ 14 ರಂದು ಜಂಟಿ ಖಾತೆಯಲ್ಲಿದ್ದ ಇದೇ ಜಾಗದ ದಾಖಲೆಯನ್ನು ಕಾರ್ಕಳ ಪಿ.ಎಲ್.ಡಿ ಸಹಕಾರಿ ಸಂಘದಲ್ಲಿ ಅಡಮಾನ ಇರಿಸಿ ಕೃಷ್ಣ ನಾಯಕ್ ಅವರ ಸಹಿ ಪೋರ್ಜರಿ ಮಾಡಿ ಆರೋಪಿಗಳಾದ ಅವರ ಸಹೋದರ ಅಪ್ಪಿ ನಾಯಕ್, ಅವರ ಮಕ್ಕಳಾದ ರವೀಂದ್ರ ನಾಯಕ್, ರೋಹಿಣಿ, ಮೋಹಿನಿ ಹಾಗೂ ಶ್ರೀವಾಣಿ ಸೇರಿ ಸಾಲ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಹಿ ದುರ್ಬಳಕೆ ಮಾಡಿ ಬ್ಯಾಂಕ್ ಸಾಲ ಪಡೆದ ವಿಚಾರದಲ್ಲಿ ಅಪ್ಪಿ ನಾಯಕ್ ಹಾಗೂ ರವೀಂದ್ರ ನಾಯಕ್ ವಿರುದ್ಧ 2024ರಲ್ಲಿ ದೂರು ನೀಡಿದ ಬಳಿಕ ಇವರು ತರಾತುರಿಯಲ್ಲಿ ಬಾಕಿ ಉಳಿದ ಸಾಲವನ್ನು ಮರುಪಾವತಿ ಮಾಡಿದ್ದರು. ತನಗೆ ಮೋಸ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ದೂರಿನ ಕುರಿತು ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.

