ನವದೆಹಲಿ: : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದರೂ ಅವರು ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಂತಿಲ್ಲ,ಇದರಿಂದ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಕೇಜ್ರಿವಾಲ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ. ಇದರಿಂದ ಕೇಜ್ರಿವಾಲ್ ಅವರಿಗೆ ಮತ್ತೆ ನಿರಾಶೆ ಎದುರಾಗಿದೆ. ದಿಲ್ಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿರುವ ಕ್ರಮದ ವಿರುದ್ಧ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಕೇಜ್ರಿವಾಲ್ ಅವರು ಹಾಲಿ ದಿಲ್ಲಿ ಸಿಎಂ ಆಗಿದ್ದಾರೆ ಮತ್ತು ಅವರು ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸುವ ಅಗತ್ಯವಿದೆ. ಹೀಗಾಗಿ ಅವರ ಮಧ್ಯಂತರ ಜಾಮೀನು ಅರ್ಜಿಯ ವಾದ ವಿವಾದ ಆಲಿಸುವುದಾಗಿ ಜ್ಯಾರಿ ನಿರ್ದೇಶನಾಲಯಕ್ಕೆ ತಿಳಿಸಿತು. ಬುಧವಾರ ವಿಚಾರಣೆಗೆ ಬಳಿಕ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯ, ಬಳಿಕ ಮಧ್ಯಂತರ ಆದೇಶವನ್ನು ಮುಂದೂಡಿತು. ಗುರುವಾರ ಅಥವಾ ಮುಂದಿನ ವಾರ ಇದು ಮತ್ತೆ ನ್ಯಾಯಪೀಠದ ಮುಂದೆ ಬರುವ ಸಾಧ್ಯತೆಯಿದೆ. ಅರವಿಂದ್ ಕೇಜ್ರಿವಾಲ್ ಅವರು ರೂಢಿಗತ ಅಪರಾಧಿ ಅಲ್ಲ ಎಂದು ಹೇಳಿದ ನ್ಯಾ ಸಂಜೀವ್ ಖನ್ನಾ ಮತ್ತು ನ್ಯಾ ದಿಪಾಂಕರ್ ದತ್ತಾ ಅವರನ್ನು ಒಳಗೊಂಡ ದ್ವಿ ಸದಸ್ಯ ನ್ಯಾಯಪೀಠ, ಇದು ಅಸಾಧಾರಣ ಪರಿಸ್ಥಿತಿ ಎಂದು ಅಭಿಪ್ರಾಯಪಟ್ಟಿತು
ರಾಜಕಾರಣಿಗೆ ವಿಶೇಷ ಸವಲತ್ತು ಇಲ್ಲ
ಕೋರ್ಟ್ ಸಲಹೆಯನ್ನು ತಿರಸ್ಕರಿಸಿದ ಜ್ಯಾರಿ ನಿರ್ದೇಶನಾಲಯ, ಇದು ತಪ್ಪು ಉದಾಹರಣೆ ಸೃಷ್ಟಿಸಲಿದೆ ಎಂದು ವಾದಿಸಿತು. “ಸಾಮಾನ್ಯ ನಾಗರಿಕರಿಗೆ ಹೋಲಿಸಿದರೆ ರಾಜಕಾರಣಿಗೆ ವಿಶೇಷ ಹಕ್ಕುಗಳು ಇರುವುದಿಲ್ಲ. ವಿಚಾರಣೆ ಎದುರಿಸುತ್ತಿರುವ ಎಲ್ಲಾ ಸಂಸದರು ಮತ್ತು ಶಾಸಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೇ? ಎಂದು ಇಡಿ ಪರ ವಕೀಲರು ಪ್ರಶ್ನಿಸಿದರು. ಇಡಿ ಪ್ರಸ್ತಾಪಿಸಿದ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವಂತೆ ಕೇಜ್ರಿವಾಲ್ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಕೋರ್ಟ್ ಸೂಚಿಸಿತು.
“ಸಾಮಾನ್ಯ ವ್ಯಕ್ತಿಗೆ ಹೋಲಿಸಿದರೆ ರಾಜಕೀಯ ವ್ಯಕ್ತಿಗೆ ವಿಶೇಷ ಸವಲತ್ತು ನೀಡಬಹುದೇ? 5000 ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ. ಅವರೆಲ್ಲರೂ ನಾವು ಪ್ರಚಾರಕ್ಕೆ ಹೋಗಬೇಕು ಎಂದರೆ ಏನಾಗಲಿದೆ? ಆರು ತಿಂಗಳಲ್ಲಿ 9 ಸಮನ್ಸ್‌ಗಳನ್ನು ನೀಡಲಾಗಿದೆ. ಇದೇ ಸಮಯವನ್ನು ಆಯ್ಕೆ ಮಾಡಿರುವುದಕ್ಕೆ ಜ್ಯಾರಿ ನಿರ್ದೇಶನಾಲಯವನ್ನು ದೂಷಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ