ಖುಂಟಿ (ಜಾರ್ಖಂಡ್):ಪಾಕ್ ಆಕ್ರಮಿತ ಕಾಶ್ಮೀರದ ಪ್ರತೀ ಭಾಗವೂ ಭಾರತಕ್ಕೆ ಸೇರಿದ್ದು, ಇದನ್ನು ಯಾರಿಗೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ.
ಅವರು ಜಾರ್ಖಂಡ್ ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಪಾಕ್ ಪರಮಾಣು ಬಾಂಬ್ ಹೊಂದಿದೆ. ಅದನ್ನು ಗೌರವಿಸಿ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇದೇವೇಳೆ ಮಾತನಾಡಿದ ಶಾ, ‘ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್, ಪಾಕಿಸ್ತಾನವು ಪರಮಾಣು ಬಾಂಬ್ ಹೊಂದಿದೆ. ಹಾಗಾಗಿ ಅದನ್ನು ಗೌರವಿಸಿ ಎಂದು ಹೇಳುತ್ತಾರೆ. ಕೆಲವು ದಿನಗಳ ಹಿಂದೆ ಇಂಡಿಯಾ ಮೈತ್ರಿ ಕೂಟದ ನಾಯಕ ಫಾರೂಖ್ ಅಬ್ದುಲ್ಲಾ, ಪಾಕಿಸ್ತಾನದಲ್ಲಿ ಪರಮಾಣು ಬಾಂಬ್ ಇರುವುದಿಂದ ಯಾರು ಅದರ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಾರೆ. ನಾನು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿ ಕೂಟಕ್ಕೆ ಹೇಳಲು ಬಯಸುತ್ತೇನೆ. ಪಿಒಕೆ ಭಾರತಕ್ಕೆ ಸೇರಿದ್ದು. ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಗುಡುಗಿದರು. ‘ಸಂಸತ್‌ನಲ್ಲಿ ಸರ್ವಾನುಮತದಿಂದಲೇ ಪಾಕ್ ಆಕ್ರಮಿತ ಪ್ರದೇಶ ಭಾರತದ್ದು ಎನ್ನುವ ನಿರ್ಣಯ ಅಂಗೀಕಾರವಾಗಿದೆ. ಆದರೆ ಕಾಂಗ್ರೆಸ್‌ಗೆ ಏನಾಗಿದೆ ಗೊತ್ತಿಲ್ಲ. ಅವರು ಈಗ ಪಿಒಕೆ ಬಗ್ಗೆ ಪ್ರಶ್ನೆ ಎತ್ತುತ್ತಿದ್ದು ಅವರ ನಿಲವು ಪಾಕ್ ಪರವಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಪಿಒಕೆ ಪ್ರತೀ ಇಂಚು ನಮ್ಮದೇ .ಅಲ್ಲದೇ ಮುಂದೆಯೂ ಹಾಗೆ ಇರಲಿದೆ. ಈ ವಿಚಾರದಲ್ಲಿ ಬಿಜೆಪಿ ಸ್ಪಷ್ಟವಾಗಿದೆ’ ಕೇಂದ್ರ ಗೃಹ ಸಚಿವ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಅವರನ್ನು 20 ಬಾರಿ ರಾಜಕೀಯದಲ್ಲಿ ಲಾಂಚ್ ಮಾಡಲು ಪ್ರಯತ್ನಿಸಿದರು. ಆದರೆ ಪ್ರತಿ ಪ್ರಯತ್ನದಲ್ಲೂ ಅವರಿಗೆ ಸೋಲಾಯಿತು. ಇದೀಗ ಇದೀಗ ರಾಹುಲ್ ಗಾಂಧಿ ರಾಯ್‌ಬರೇಲಿಯಿಂದ ಕಣಕ್ಕಿಳಿದಿದ್ದು, ಈ ಬಾರಿಯೂ ಅವರನ್ನು ರಾಜಕೀಯ ಮುನ್ನಲೆಗೆ ತರುವ ಪ್ರಯತ್ನ ವಿಫಲವಾಗಲಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ವ್ಯಂಗ್ಯವಾಡಿದರು.






