ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಇಂದು (ಜುಲೈ 12) ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿಂತೆ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಇ.ಡಿಯ ಈ ಕ್ರಮವನ್ನು ಪ್ರಶ್ನಿಸಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತ ಅವರಿದ್ದ ಪೀಠವು, ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಜಾಮೀನು ದೊರೆತರೂ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿರುವುದರಿಂದ ಅವರು ಜೈಲಿನಲ್ಲೇ ಇರಲಿದ್ದಾರೆ ಎಂದು ತಿಳಿದು ಬಂದಿದೆ.
ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸುವಾಗ, ಪ್ರಸ್ತುತ ಪೀಠವು ಇದುವರೆಗೆ ಅವರ ಸೆರೆವಾಸವನ್ನು ಪರಿಗಣಿಸಿ ಮಧ್ಯಂತರ ಜಾಮೀನು ನೀಡಲು ನಿರ್ಧರಿಸಿತು. ಮಧ್ಯಂತರ ಜಾಮೀನಿನ ಆದೇಶವನ್ನು ವಿಸ್ಕೃತ ಪೀಠ ಮಾರ್ಪಡಿಸಬಹುದು ಎಂದು ಪೀಠ ಸ್ಪಷ್ಟಪಡಿಸಿದೆ.