Share this news

ನವದೆಹಲಿ: ಅಬಕಾರಿ ಹಗರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಜ್ಯಾರಿ ನಿರ್ದೇಶನಾಲಯ(ED) ವಿಚಾರಣೆಯ ವೇಳೆ ತನ್ನ ಸಂಪುಟದ ಇಬ್ಬರು ಸಚಿವರಾದ ಅತಿಷಿ ಹಾಗೂ ಸೌರಭ್‌ ಭಾರದ್ವಾಜ್‌ ಅವರ ಹೆಸರುಗಳನ್ನು ಬಾಯಿಬಿಟ್ಟಿದ್ದಾರೆ ಎಂದು ಇ.ಡಿ. ಹೇಳಿಕೊಂಡಿದೆ.

ಅಬಕಾರಿ ಹಗರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಆಮ್‌ ಆದ್ಮಿ ಪಕ್ಷದ ಸಂವಹನ ವಿಭಾಗದ ಮಾಜಿ ಮುಖ್ಯಸ್ಥ ವಿಜಯ್‌ ನಾಯರ್‌ ನನಗೇನೂ ವರದಿ ಮಾಡಿಕೊಳ್ಳುತ್ತಿರಲಿಲ್ಲ. ಅತಿಷಿ ಹಾಗೂ ಸೌರಭ್‌ ಜತೆ ಮಾತನಾಡುತ್ತಿದ್ದ. ಆತನ ಜತೆ ನನ್ನ ಮಾತುಕತೆ ಸೀಮಿತವಾಗಿತ್ತು ಎಂದು ಕೇಜ್ರಿ ಹೇಳಿದ್ದಾರೆ ಎಂದು ಇ.ಡಿ. ತಿಳಿಸಿದೆ. ಇದರಿಂದಾಗಿ ಕೇಜ್ರಿವಾಲ್‌ ಬಂಧನ ಖಂಡಿಸಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಹಾಗೂ ದೆಹಲಿ ಸರ್ಕಾರವನ್ನು ಮುನ್ನಡೆಸುತ್ತಿರುವ ಈ ಇಬ್ಬರೂ ಮಂತ್ರಿಗಳಿಗೆ ಸಂಕಷ್ಟ ಎದುರಾದಂತಾಗಿದೆ. ಈ ನಡುವೆ, ಅತಿಷಿ ಅವರನ್ನು ಈ ಬಗ್ಗೆ ಸುದ್ದಿಗಾರರು ಮಾತನಾಡಿಸಿದಾಗ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜಾರಿ ನಿರ್ದೇಶನಾಲಯದ ಆರೋಪ ಪಟ್ಟಿಯ ಪ್ರಕಾರ, ವಿಜಯ್‌ ನಾಯರ್‌ ‘ಸೌತ್‌ ಗ್ರೂಪ್‌’ಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ. ದೆಹಲಿ ಅಬಕಾರಿ ಲೈಸೆನ್ಸ್‌ ಅನ್ನು ಬೇಕಾದವರಿಗೆ ಮಂಜೂರು ಮಾಡಿಸಲು 100 ಕೋಟಿ ರೂ ಲಂಚವನ್ನು ಕೇಜ್ರಿವಾಲ್‌ ಸರ್ಕಾರಕ್ಕೆ ಕೊಡಿಸಿದ್ದ. ಪ್ರಕರಣದಲ್ಲಿ ಆರೋಪಿಯಾಗಿರುವ ಸಮೀರ್‌ ಮಹೇಂದ್ರು ಎಂಬಾತನಿಗೆ ಕೇಜ್ರಿವಾಲ್‌ ಅವರನ್ನು ಭೇಟಿಯಾಗಲು ನಾಯರ್ ಸಮಯ ನಿಗದಿ ಮಾಡಿಸಿದ್ದ. ಆದರೆ ಭೇಟಿ ಸಾಧ್ಯವಾಗದೇ ವಿಡಿಯೋ ಕಾಲ್‌ ಮೂಲಕ ಮಾತುಕತೆ ನಡೆದಿತ್ತು. ಆ ವೇಳೆ, ‘ನಾಯರ್‌ ನಮ್ಮ ಹುಡುಗ, ಆತನನ್ನು ನಂಬಬಹುದು. ಅವರ ಜತೆ ವ್ಯವಹಾರ ಮುಂದುವರಿಸಿಕೊಂಡು ಹೋಗಬಹುದು’ ಎಂದು ಕೇಜ್ರಿವಾಲ್‌ ತಿಳಿಸಿದ್ದರು.
ನಾಯರ್‌ನನ್ನು ಹಗರಣ ಸಂಬಂಧ ಸಿಬಿಐ ಹಾಗೂ ಇ.ಡಿ. ಬಂಧಿಸಿದ್ದವು. ಸದ್ಯ ಆತ ಜೈಲಿನಲ್ಲಿದ್ದಾನೆ

 

 

Leave a Reply

Your email address will not be published. Required fields are marked *