ಬೆಂಗಳೂರು : ಮೂರು ದಿನಗಳ ಹಿಂದಷ್ಟೇ ಕಿಡಿಗೇಡಿಯೊಬ್ಬ ಬೆಂಗಳೂರಿನ ಗಿರಿನಗರದ ವೀರಭದ್ರ ಬಸ್ ನಿಲ್ದಾಣದಲ್ಲಿರುವ ಸಿದ್ದಗಂಗಾ ಶ್ರೀಗಳಾದ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಯವರ ಪುತ್ಥಳಿ ವಿರೂಪಗೊಳಿಸಿದ ಘಟನೆ ನಡೆದಿದ್ದು ಬೆಳಕಿಗೆ ಬಂದಿತ್ತು. ಬಂಧಿತನಾದ ಆರೋಪಿ ‘ರಾಜ್ ಶಿವು’ ತನಗೆ ಕನಸಿನಲ್ಲಿ ಯೇಸು ಬಂದು ಈ ಪುತ್ಥಳಿ ವಿರೂಪಗೊಳಿಸಲು ಹೇಳಿದ್ದನೆಂಬ ಹೇಳಿಕೆಯನ್ನೂ ನೀಡಿದ್ದ. ಈ ಘಟನೆ ಅತ್ಯಂತ ಖಂಡನೀಯವಾಗಿದ್ದು ಹಿಂದೂ ಸಂತರ ಘೋರ ಅಪಮಾನವಾಗಿದೆ. ಕಲಂ 295 ಂ ಪ್ರಕಾರ ಇದು ಶಿಕ್ಷಾರ್ಹ ಅಪರಾಧವಾಗಿದ್ದು ನಾಡಿನ ಕೋಟ್ಯಂತರ ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ಮಾಡಿದ ಆಘಾತವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಮೋಹನ ಗೌಡ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಇಂತಹ ಗಂಭೀರ ಘಟನೆ ನಡೆದರೂ ಆಡಳಿತಾಧಿಕಾರಿಗಳು ಮೌನವಹಿಸಿದ್ದಾರೆ. ಇದು ರಾಜ್ಯ ಸರಕಾರದ ಜಾತ್ಯತೀತ ಧೋರಣೆಯೇ ? ಇದೇ ರೀತಿ ಇತರ ಧರ್ಮದ ಶ್ರದ್ಧಾಸ್ಥಾನಗಳ ಅವಮಾನವಾಗಿದ್ದರೆ ಮೌನವಹಿಸುತ್ತಿದ್ದರೇ ? ಎಂದು ಅವರು ಪ್ರಶ್ನಿಸಿದ್ದಾರೆ. ಇದುವರೆಗೆ ಕೇವಲ ಜಿಹಾದಿ ಮತಾಂಧರ ಅನೇಕ ಜಿಹಾದ್ ಗಳನ್ನು ನಾವು ನೋಡಿದೆವು, ಈಗ ಯೇಸುವಿನ ಹೆಸರಿನಲ್ಲೂ ಹಿಂದೂ ಧರ್ಮದ ಮೇಲೆ ಮತ್ತು ಸಂತರ ಮೇಲೆ ಆಘಾತವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇದು ರಾಜ್ಯ ಸರಕಾರಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯ ಸರಕಾರ ಈ ಘಟನೆ ಚಿಕ್ಕದೆಂದು ಮುಚ್ಚಿ ಹಾಕದೇ ಇದರ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಇದರ ವಿರುದ್ಧ ತೀವ್ರ ಆಂದೋಲನ ನಡೆಸಲಾಗುವುದೆಂದು ಹಿಂದೂ ಜನಜಾಗೃತಿ ಸಮಿತಿ ಎಚ್ಚರಿಸಿದೆ.