ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಕಲಿ ತೆರಿಗೆ ನೋಂದಣಿ ಜಾಲವೊಂದು ಪತ್ತೆಯಾಗಿದ್ದು, ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ ಲಕ್ಷಾಂತರ ರೂ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚಕರು ಮಹಾನಗರ ಪಾಲಿಕೆಯಿಂದ ನೀಡುವ ಸರ್ಟಿಫಿಕೇಟ್ನ್ನೇ ಕಂಪ್ಯೂಟರ್ ತಂತ್ರಜ್ಞಾನ ಬಳಸಿ ನಕಲಿ ಮಾಡಿ ವಂಚಿಸಿದ್ದಾರೆ. ಅಲ್ಲದೆ ಉದ್ದಿಮೆದಾರರಿಂದ ಹಣ ಸಂಗ್ರಹಿಸಿ ಪಾಲಿಕೆಗೆ ಕಟ್ಟದೆ ಕೆಲ ಏಜೆಂಟರು ದೋಖಾ ಮಾಡಿದ್ದಾರೆ.
ಮೇಲ್ನೋಟಕ್ಕೆ ನೋಡಿದರೆ ನಕಲಿ ಸರ್ಟಿಫಿಕೇಟ್ ಗೂ ಅಸಲಿ ಗೂ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ಆದರೆ ಕೆಲ ಸರ್ಟಿಫಿಕೇಟ್ನಲ್ಲಿ ಯಾರದ್ದೋ ಕ್ಯೂ ಆರ್ ಕೋಡ್ ಬಳಕೆ ಮಾಡಲಾಗಿದ್ದು, ಸ್ಕ್ಯಾನ್ ಮಾಡಿದಾಗ ಬೇರೆ ಉದ್ದಿಮೆದಾರರ ಪರವಾನಗಿ ಪತ್ರ ಲಭ್ಯವಾಗುತ್ತಿದೆ. ಇನ್ನು ಉದ್ದಿಮೆದಾರರು ಇದೇ ಮೂಲ ಪ್ರತಿ ಎಂದು ನಂಬಿ ಮೋಸ ಹೋಗಿದ್ದಾರೆ.
ಕೆಲ ಸರ್ಟಿಫಿಕೇಟ್ಗಳಲ್ಲಿ ಪರವಾನಗಿ ನವೀಕರಣದ ದಿನಾಂಕಗಳಷ್ಟೇ ಬದಲಾವಣೆ ಮಾಡಲಾಗಿದೆ. ಸುಮಾರು 4,500 ಉದ್ದಿಮೆ ಪರವಾನಗಿಯನ್ನು ನಕಲಿ ಮಾಡಿರುವ ಸಂಶಯ ವ್ಯಕ್ತವಾಗಿದ್ದು, ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ದಾಖಲೆ ತಿದ್ದುಪಡಿ, ನಕಲಿ ಆಗಿದೆಯಾ ಎಂದು ಅವರೇ ಪರಿಶೀಲನೆ ಮಾಡಿಕೊಳ್ಳಬಹುದು. ನಮ್ಮ ಗಮನಕ್ಕೆ ತಂದರೆ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆ. ಎಲ್ಲಾ ಪಾವತಿಗೂ ಆನ್ಲೈನ್ ವ್ಯವಸ್ಥೆ ಇದೆ. ಆನ್ಲೈನ್ಪಾವತಿ ಮಾಡಿ ತಮ್ಮ ಸೇವೆಯನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಮಧ್ಯವರ್ತಿಗಳ ಬಳಿ ಹೋಗದೆ ನಾಗರಿಕರು ಮಾಡಬಹುದು. ಏನೇ ಸೇವೆ ಬೇಕು ಅಂದ್ರು ನಮ್ಮ ಅಧಿಕಾರಿಗಳು, ಸಿಬ್ಬಂದಿಗಳು ಸಹಾಯ ಮಾಡುತ್ತಾರೆ. ನಕಲಿ, ವಂಚನೆ, ಭ್ರಷ್ಟಾಚಾರ ತಡೆಯಲು ಇದು ಸಹಕಾರಿ ಆಗಲಿದೆ ಎಂದು ಪಾಲಿಕೆ ಕಮಿಷನರ್ ರವೀಂದ್ರ ನಾಯಕ್ ಹೇಳಿದ್ದಾರೆ.