ಹೆಬ್ರಿ, ಜು.23: ಹೆಬ್ರಿಯ ಕಳ್ತೂರು ಸಂತೆಕಟ್ಟೆಯ ಸಿರಿ ಮುಡಿ ಹೊಟೇಲಿನಲ್ಲಿ ಜು.20ರಂದು ನಡೆದ ವ್ಯಕ್ತಿಯೊಬ್ಬನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ರೌಡಿ ಶೀಟರ್ ಸೇರಿದಂತೆ ಒಟ್ಟು ನಾಲ್ಕು ಮಂದಿ ಆರೋಪಿಗಳನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.
ರೌಡಿ ಶೀಟರ್‌ಗಳಾದ ಶ್ರೀಕಾಂತ್ ಕುಲಾಲ್ ಮತ್ತು ಸದಾನಂದ ಪೂಜಾರಿ ಎಂಬವರು ಸಂತೋಷ ನಾಯ್ಕ ಎಂಬವರೊಂದಿಗೆ ಸೇರಿಕೊಂಡು,ಹಳೆ ರೌಡಿಶೀಟರ್ ರಾಜೇಶ ನಾಯ್ಕ್ ಎಂಬವರಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ಘಟನೆಯಿಂದ ಗಂಭೀರವಾಗಿ ಗಾಯಗೊಂಡ ರಾಜೇಶ್ ನಾಯ್ಕ್ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಇದಕ್ಕೆ ಪ್ರತಿಯಾಗಿ ಸಂತೋಷ್ ನಾಯ್ಕ ನೀಡಿದ ದೂರಿನಲ್ಲಿ ರಾಜೇಶ್ ನಾಯ್ಕ ವಿರುದ್ಧ ಜಾತಿನಿಂದನೆ ದೂರು ದಾಖಲಾಗಿತ್ತು.ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜೇಶ್ ನಾಯ್ಕ್ ಅವರ ಕೊಲೆಯತ್ನ ಪ್ರಕರಣದಲ್ಲಿ ಕಳ್ತೂರು ಗ್ರಾಮದ ಸಂತೆಕಟ್ಟೆಯ ಶ್ರೀಕಾಂತ ಕುಲಾಲ್(29), ಕೆಂಜೂರಿನ ಸಂತೋಷ ನಾಯ್ಕ(43), ಸಂತೆಕಟ್ಟೆಯ ಸದಾನಂದ ಪೂಜಾರಿ(46) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಜಾತಿ ನಿಂದನೆ ಪ್ರಕರಣದಲ್ಲಿ ಸಂತೆಕಟ್ಟೆಯ ರಾಜೇಶ್ ನಾಯ್ಕ(30)ನನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀಕಾಂತ ಕುಲಾಲ್, ಸದಾನಂದ ಪೂಜಾರಿ, ರಾಜೇಶ್ ನಾಯ್ಕ ವಿರುದ್ಧ ಹೆಬ್ರಿ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.