ಹೆಬ್ರಿ: ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಲ್ಲಿ ಸಂಗ್ರಹವಾಗಿದ್ದ ದೇಣಿಗೆ ಹಣದ ಲೆಕ್ಕಾಚಾರ ವಿಚಾರದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರ ಕುಟುಂಬ ಹಾಗೂ ಅವರ ವಿರೋಧಿ ಬಣದ ನಡುವೆ ಹೊಡೆದಾಟ ನಡೆದಿದೆ.
ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ನಂದಲ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಣದ ವಿಚಾರದಲ್ಲಿ ಹೊಡೆದಾಟ ನಡೆದಿದೆ.
ದೇವಸ್ಥಾನದ ಅನುವಂಶಿಕ ಆಡಳಿತ ವರ್ಗದವರಾದ ಮನೋರಮಾ, ಅವರ ಪತಿ ಶೇಖರ ,ಪುತ್ರ ಪ್ರವೀಣ್ ಕುಮಾರ್ ,ಅನಿಲ್, ಸುಪ್ರೀತ್ ಮತ್ತಿತರರು ಹಾಗೂ ವಿಜಯ್, ರಾಘವೇಂದ್ರ, ಸುದರ್ಶನ, ಉಮೇಶ್, ಶ್ರೀನಿವಾಸ ಹಾಗೂ ನಾಗರಾಜ ಮತ್ತಿತರರು ಶುಕ್ರವಾರ ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ಹೊಡೆದಾಡಿಕೊಂಡಿದ್ದಾರೆ.
ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಗೆ ಹಸ್ತಾಂತರಿಸಬೇಕೆಂದು ವಿಜಯ್ ರಾಘವೇಂದ್ರ, ಸುದರ್ಶನ್, ಉಮೇಶ್ ಮತ್ತಿತರರು ಧಾರ್ಮಿಕ ದತ್ತಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.ಆದರೆ ಈ ವಿಚಾರದಲ್ಲಿ ಎರಡೂ ತಂಡಗಳ ನಡುವೆ ಇದೇ ವಿಚಾರದಲ್ಲಿ ವೈಷಮ್ಯ ಏರ್ಪಟ್ಟಿತ್ತು. ಹಣದ ಲೆಕ್ಕಾಚಾರ ವಿಚಾರದಲ್ಲಿ ಆರಂಭವಾದ ಜಗಳ ಬಳಿಕ ಇತ್ತಂಡಗಳ ನಡುವೆ ಮಾರಾಮಾರಿಗೆ ವೇದಿಕೆಯಾಯಿತು. ಧಾರ್ಮಿಕ ಕ್ಷೇತ್ರದಲ್ಲಿ ವೈಯಕ್ತಿಕ ಪ್ರತಿಷ್ಠೆಗಾಗಿ ಈ ರೀತಿ ಹೊಡೆದಾಟ ನಡೆಸಿರುವುದು ಭಕ್ತರ ಹಾಗೂ ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

