Share this news

ಬೆಂಗಳೂರು: ಗಣಿ ಹಗರಣ ಪ್ರಕರಣದ ತನಿಖೆ ವಿಚಾರವಾಗಿ ಕಳೆದ ಕೆಲವು ದಿನಗಳ ಹಿಂದೆ ಎಡಿಜಿಪಿ ಚಂದ್ರೇಶಖರ್​ ಮತ್ತು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಹೆಚ್​ಡಿ ಕುಮಾರಸ್ವಾಮಿ ಅವರು ಎಡಿಜಿಪಿ ಚಂದ್ರಶೇಖರ್​ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಚಂದ್ರಶೇಖರ್ ಅವರು ದೂರು ದಾಖಲಿಸಿದ್ದರು. 

ಎಡಿಜಿಪಿ ಚಂದ್ರಶೇಖರ್​  ಅವರು ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ​ ದಾಖಲಾಗಿದೆ. ಬಿಎನ್​ಎಸ್​ ಅಂಡರ್ ಸೆಕ್ಷನ್ 224ರ ಅಡಿಯಲ್ಲಿ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಹೆಚ್​ಡಿ ಕುಮಾರಸ್ವಾಮಿ ಆರೋಪಿ ನಂಬರ್​ 1 ಆಗಿದ್ದಾರೆ. ಜೆಡಿಎಸ್​ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಆರೋಪಿ ನಂಬರ್​ 2 ಆಗಿದ್ದಾರೆ. ಮತ್ತು ಜೆಡಿಎಸ್​ ಮುಖಂಡ ಸುರೇಶ್ ಬಾಬು ಆರೋಪಿ ನಂಬರ್​ 3 ಆಗಿದ್ದಾರೆ.

ಆರೋಪಿಗಳು ದುರುದ್ದೇಶ ಪೂರಿತವಾಗಿ ಆರೋಪ ಮಾಡಿದ್ದಾರೆ. ಮತ್ತು ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಶೇಖರ್ ಅವರು ದೂರಿನಲ್ಲಿ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಮೂವರ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯದ ಆದೇಶದಂತೆ ಎಫ್​ಐಆರ್​ ದಾಖಲಾಗಿದೆ.

ತಾನು ಕುಮಾರಸ್ವಾಮಿ ವಿರುದ್ಧ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 16/2014 ಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸಾಕ್ಷ್ಯಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಪಾಲರ ಅನುಮತಿ ಕೋರಿದ್ದೆ. ಈ ಹಿನ್ನೆಲೆಯಲ್ಲಿ ಸೆ.28 ಹಾಗೂ ಸೆ.29ರಂದು ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ತನ್ನ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ಆರೋಪಗಳನ್ನು ಮಾಡಿ, ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಶೇಖರ್ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದರು. ಕರ್ನಾಟಕ ಕೇಡರ್ ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಮೌಖಿಕ ಬೆದರಿಕೆ ಹಾಕಿದ್ದಾರೆ ಹಾಗೂ ತಾನು ಬೌರಿಂಗ್ ಆಸ್ಪತ್ರೆಯಿಂದ ಸುಳ್ಳು ವೈದ್ಯಕೀಯ ದಾಖಲಾತಿಯನ್ನು ಪಡೆದು ಕರ್ನಾಟಕ ಕೇಡರ್ ನಲ್ಲಿ ಮುಂದುವರೆಯುತ್ತಿರುವುದಾಗಿಯೂ ಆರೋಪ ಮಾಡಿದ್ದಾರೆ ಎಂದು ಎಡಿಜಿಪಿ ಚಂದ್ರಶೇಖರ್ ದೂರಿನಲ್ಲಿ ಆರೋಪಿಸಿದ್ದರು.

ಈ ದೂರಿಗೆ ಸಂಬಂಧಿಸಿ ಕೇಂದ್ರ ಸಚಿವರ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯದ ಅನುಮತಿ ಕೋರಲಾಗಿತ್ತು. ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ. ಅದರಂತೆ ಸಂಜಯ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *