Share this news

ಬೆಂಗಳೂರು: ಸುಳ್ಳು ಮಾಹಿತಿ ಕೊಟ್ಟು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಶಾಕ್ ಕಾದಿದ್ದು, ಅಗತ್ಯ ಮಾನದಂಡ ಹೊರತಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರ ಪಟ್ಟಿ ಸಿದ್ಧ ಮಾಡುವ ಮೂಲಕ ಆಹಾರ, ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆ ಮೇಜರ್ ಸರ್ಜರಿಗೆ ಮುಂದಾಗಿದೆ.

ಹತ್ತಾರು ಎಕರೆ ಜಮೀನು, ಓಡಾಡಲು ಐಷಾರಾಮಿ ಕಾರು, ವಾಸ ಮಾಡಲು ಬಂಗಲೆ ಇರುವವರೂ ಪಡಿತರ ಚೀಟಿ ಪಡೆದು ರೇಷನ್ ಪಡೆಯುತ್ತಿದ್ದಾರೆ. ಅದನ್ನು ತಿನ್ನುವುದೂ ಇಲ್ಲ. ಬದಲಿಗೆ ಸಿಕ್ಕ ದರಕ್ಕೆ ಮಾರಾಟ ಮಾಡುತ್ತಾರೆ. ಹೀಗಾಗಿ ಅನರ್ಹರಿಗೆ ನೀಡಿರುವ ಬಿಪಿಎಲ್ ಕಾರ್ಡ್​ಗಳನ್ನ ರದ್ದು ಮಾಡಬೇಕು ಎನ್ನುವ ಕೂಗು ಆಗಾಗ್ಗೆ ಕೇಳಿ ಬರುತ್ತಿತ್ತು. ಇದೀಗ ಕೊನೆಗೂ ಎಚ್ಚೆತ್ತಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನರ್ಹ ಬಿಪಿಎಲ್ ಕಾರ್ಡ್ ರದ್ದತಿಗೆ ಮುಂದಾಗಿದೆ.

ಈ ಬಗ್ಗೆ ಸಚಿವ ಕೆಎಚ್​ ಮುನಿಯಪ್ಪ ಪ್ರತಿಕ್ರಿಯಿಸಿದ್ದು, ಅನರ್ಹರ ಕಾರ್ಡ್​ಗಳನ್ನು ರದ್ದು ಮಾಡಲು ಸಿದ್ಧತೆಗಳು ನಡೆಯುತ್ತಿವೆ .ರಾಜ್ಯದಲ್ಲಿ ವಿತರಣೆ ಮಾಡಲಾಗಿರುವ 1.50 ಕೋಟಿಗೂ ಹೆಚ್ಚಿನ ಕಾರ್ಡ್​​ಗಳಲ್ಲಿ ಸುಮಾರು 12 ಲಕ್ಷ ಅನರ್ಹ, ಅನುಮಾನಾಸ್ಪದ ಎಂದು ಪಟ್ಟಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಅನರ್ಹ ಬಿಪಿಎಲ್ ಕಾರ್ಡ್​​ಗಳ ವಿವರ:
ಮೃತಪಟ್ಟವರ ಹೆಸರು ಡಿಲೀಟ್​​ ಮಾಡದೇ ಇರುವುದು – 1,446
ಅಂತರರಾಜ್ಯ ಪಡಿತರ ಚೀಟಿದಾರರು – 57,864
25 ಲಕ್ಷ ರೂ.ಮೇಲಿನ ಜಿಎಸ್​ಟಿ ವ್ಯವಹಾರ – 2,684
1.20 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ – 5,13,613
ಕಂಪನಿಗಳಲ್ಲಿ ಡೈರೆಕ್ಟರ್​ ಆಗಿರುವವರು – 19.690
7.5 ಎಕರೆ ಹೆಚ್ಚಿನ ಜಮೀನು ಹೊಂದಿರುವವರು – 33,456
ಇ-ಕೆವೈಸಿ ಮಾಡಿಸದೆ ಇರುವವರು – 6,16,196
ಕಳೆದ ಆರು ತಿಂಗಳಿಂದ ರೇಷನ್​ ಪಡೆಯದವರು – 19,893

2017ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಮಾನದಂಡಗಳ ಪ್ರಕಾರ, ಬಿಪಿಎಲ್​ ಕಾರ್ಡ್​ ಪಡೆಯಲು ಹಲವು ನಿಬಂಧನೆಗಳನ್ನು ಹೇರಲಾಗಿದೆ. ಸರ್ಕಾರಿ ನೌಕರಿಯಲ್ಲಿರಬಾರದು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಭೂಮಿ, ನಗರ ಪ್ರದೇಶದಲ್ಲಿ 1 ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ಭೂಮಿ ಹೊಂದಿರಬಾರದು, ನಾಲ್ಕು ಚಕ್ರದ ವಾಹನ ಇರಬಾರದು, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಮೀರಬಾರದು ಎಂಬಿತ್ಯಾದಿ ಮಾನದಂಡ ಹೇರಲಾಗಿದೆ. ಆದರೂ, ಅವ್ಯಾವುವೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.
ನೀತಿ ಆಯೋಗದ ವರದಿ ಪ್ರಕಾರ 2021ನೇ ಸಾಲಿನಂತೆ ರಾಜ್ಯದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳು ಶೇ 7.58 ಮಾತ್ರ. ಆದರೆ ವಿತರಣೆಯಾದ ಬಿಪಿಎಲ್​​ ಕಾರ್ಡ್​ಗಳು ಇದಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ಹೀಗಾಗಿ ಹೊಸದಾಗಿ ಬಿಪಿಎಲ್​ ಕಾರ್ಡ್​ಗೆ ಅರ್ಜಿ ಸಲ್ಲಿಸಿರುವ ಮಂದಿಗೂ ಕಾರ್ಡ್​ ಸಿಗದೆ ಪರದಾಟ ನಡೆಸುತ್ತಿದ್ದಾರೆ. ಹೀಗಾಗಿ ಅನುಮಾನಸ್ಪದ 12 ಲಕ್ಷ ಕಾರ್ಡ್​​ಗಳಲ್ಲಿ 8 ಲಕ್ಷಕ್ಕೂ ಹೆಚ್ಚಿನ ಕಾರ್ಡ್​ಗಳು ಡಿಲೀಟ್​ ಆಗುವುದು ಬಹುತೇಕ ನಿಶ್ಚಿತ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *