ಚಿಕ್ಕಬಳ್ಳಾಪುರ: ಮಾಜಿ ಸಿಎಂ, ಮಾಜಿ ಸಂಸದ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ.
ಈ ಕುರಿತಂತೆ ಸೋಮವಾರ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತಿದ್ದೇನೆ.
ಚಿಕ್ಕಬಳ್ಳಾಪುರದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಮಾರ್ಪಾಡಿಯವರಾಗಿರುವ ಡಾ.ಎಂ ವೀರಪ್ಪ ಮೊಯ್ಲಿ ಕಾರ್ಕಳದಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿ ಬಳಿಕ 6 ಬಾರಿ ಶಾಸಕರಾಗಿ ಮಂತ್ರಿಯಾಗಿ ಮುಖ್ಯಮಂತ್ರಿಯಾಗಿ ತದನಂತರ ಲೋಕಸಭಾ ಸದಸ್ಯರಾಗಿ ಕೇಂದ್ರ ಸಚಿವರಾಗಿ ಅಪಾರ ರಾಜಕೀಯ ಅನುಭವ ಪಡೆದಿದ್ದಾರೆ. ಸುಮಾರು 60 ವರ್ಷಗಳ ರಾಜಕೀಯ ಜೀವನದ ಜತೆಗೆ ಸಾಹಿತ್ಯದ ವಿಚಾರದಲ್ಲಿ ಕೂಡ ಸಾಕಷ್ಟು ಹೆಸರು ಗಳಿಸಿದ್ದಾರೆ.
ಸುಳಿಗಾಳಿ, ಸಾಗರದೀಪ, ಕೊಟ್ಟ, ತೆಂಬರೆ ಸೇರಿದಂತೆ ವಿವಿಧ ಕಾದಂಬರಿಗಳನ್ನು ಬರೆದಿದ್ದಾರೆ. ಇದಲ್ಲದೇ ನಾಟಕ, ಕವನ ಸಂಕಲನ, ಮಹಾಕಾವ್ಯಗಳನ್ನು ಬರೆದಿದ್ದಾರೆ. ಇದೀಗ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸುವ ಮೂಲಕ ಯುವ ಸಮುದಾಯಕ್ಕೆ ಅವಕಾಶ ಕಲ್ಪಿಸಿದ್ದಾರೆ