ಕೊಲ್ಕತ್ತಾ : ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಗಂಗೂಲಿ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ವರದಿಗಳ ಪ್ರಕಾರ, ಸೌರವ್ ಗಂಗೂಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬುರ್ದ್ವಾನ್‌ಗೆ ಹೋಗುತ್ತಿದ್ದರು. ದುರ್ಗಾಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಬರುವ ದಂತನ್‌ಪುರದಲ್ಲಿ ಟ್ರಕ್ ಒಂದು ಬೆಂಗಾವಲು ಪಡೆಯ ವಾಹನದ ಮುಂದೆ ಬಂದಿದೆ. ಆಗ ಕಾರಿನ ಚಾಲಕ ಬ್ರೇಕ್ ಹಾಕಬೇಕಾಯಿತು. ಪರಿಣಾಮ ಅವರ ಹಿಂದಿದ್ದ ಕಾರುಗಳು ಏಕಾಏಕಿ ಡಿಕ್ಕಿಯಾಗಿವೆ. ಗಂಗೂಲಿಯಿದ್ದ ಕಾರು ಕೂಡ ಅಪಘಾತಕ್ಕೆ ಒಳಗಾಗಿದೆ.
ಈ ಅಪಘಾತದಲ್ಲಿ ಗಂಗೂಲಿ ಮತ್ತು ಅವರ ಬೆಂಗಾವಲು ಪಡೆಗೆ ಯಾವುದೇ ಗಾಯವಾಗಿಲ್ಲ. ಬೆಂಗಾವಲು ಪಡೆಯ ಎರಡು ವಾಹನಗಳಿಗೆ ಸ್ವಲ್ಪ ಹಾನಿಯಾಗಿದೆ. ಅಪಘಾತ ಹಿನ್ನೆಲೆಯಲ್ಲಿ ಗಂಗೂಲಿ ಘಟನಾ ಸ್ಥಳದಲ್ಲಿ ಸುಮಾರು 10 ನಿಮಿಷಗಳ ಕಾಲವಿದ್ದರು. ನಂತರ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಿದ್ದಾರೆ. ಪಶ್ಚಿಮ ಬಂಗಾಳದ ಬುರ್ದ್ವಾನ್ ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ.
