ಬೆಂಗಳೂರು: ಗ್ರಾಮೀಣ ಭಾಗದ ಪತ್ರಕರ್ತರಿಗೂ ಉಚಿತ ಸಾರಿಗೆ ಬಸ್ ಪಾಸ್ ವಿತರಣೆಗೆ ಸರ್ಕಾರ ಆದೇಶ ಹೊರಡಿಸಿದೆ.
ಅರೆಕಾಲಿಕ ಹಾಗೂ ಸಂಪಾದಕರಿಗೂ ಸಂಸ್ಥೆಯ ಮುಖ್ಯಸ್ಥರ ಶಿಫಾರಸ್ಸು ಪತ್ರ ನೀಡಿದರೆ ಬಸ್ ಪಾಸ್ ವಿತರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಈ ಕುರಿತು ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿದ್ದು, ಪೂರ್ಣಾವಧಿ, ಅರೆಕಾಲಿಕ ವರದಿಗಾರರಾಗಿ ನೇಮಕವಾಗಿದ್ದಲ್ಲಿ ನೇಮಕಾತಿ ಪತ್ರ, ಸಂಪಾದಕರ, ಮುಖ್ಯಸ್ಥರ ಶಿಫಾರಸ್ಸು ಪತ್ರ, ಸಂಸ್ಥೆಯಿಂದ ಪಡೆಯುತ್ತಿರುವ ಲೈನೇಜ್, ಸಂಭಾವನೆ ಪಡೆಯುತ್ತಿರುವ ಬಗ್ಗೆ ಕಳೆದ 11 ತಿಂಗಳ ಅವಧಿಯ ಬ್ಯಾಂಕ್ ಖಾತೆಯ ವಿವರಗಳು, ಸಂಬಂಧಿತ ದಾಖಲೆಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ.
ಆದರೆ ಮೊದಲು ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಲು ಪೂರ್ಣಾವಧಿಯ ಪತ್ರಕರ್ತರು ಆಗಿರಬೇಕು ಎಂಬುದಾಗಿ ಷರತ್ತು ವಿಧಿಸಲಾಗಿತ್ತು. ಈ ನಿಯಮದ ಕಾರಣ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕೈತಪ್ಪುವ ಆತಂಕ ಎದುರಾಗಿತ್ತು. ಏಕೆಂದರೆ ಬಹುತೇಕ ಗ್ರಾಮೀಣ ಪತ್ರಕರ್ತರು ಪ್ರೀ ಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ತಾಲೂಕು ಮಟ್ಟದ ಬಹುತೇಕ ಪತ್ರಕರ್ತರು ಅರೆಕಾಲಿಕ ವೃತ್ತಿಯಲ್ಲಿ ತೊಡಗಿಕೊಂಡಿರುವ ಹಿನ್ನೆಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಅವರ ಪರಿಶ್ರಮದಿಂದ ಸರ್ಕಾರವು ಬಸ್ ಪಾಸ್ ನಿಯಮದಲ್ಲಿ ಸಡಿಲಿಕೆ ಮಾಡಿದೆ.