ಕಾರ್ಕಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್ ಕಾರ್ಕಳ ಇಲ್ಲಿ ಮಕ್ಕಳ ಪಠ್ಯೇತರ ಚಟುವಟಿಕೆಗೆ ಪೂರಕವಾದ ಬೇಸಿಗೆ ಶಿಬಿರ “ಕಲಾ ಸಿಂಚನ-2024” ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತ ಬೇಸಿಗೆ ಶಿಬಿರ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಮತ್ತು ಕ್ರಿಯಾಶೀಲರನ್ನಾಗಿಸುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಸರಕಾರಿ ಶಾಲೆಯ ಪೋಷಕರು ಸಹಕರಿಸಿದರೆ ಕನ್ನಡ ಮಾಧ್ಯಮ ಶಾಲೆಗಳು ಉಳಿಯುತ್ತವೆ. ಈ ರೀತಿ ಸರಕಾರಿ ಶಾಲೆಯಲ್ಲಿ ಉಚಿತ ಬೇಸಿಗೆ ಶಿಬಿರಗಳು ಅಪರೂಪ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎ ಲೋಕೇಶ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್ ವಹಿಸಿದ್ದರು. ಬಿ ಆರ್ ಸಿ ಕೋ ಆರ್ಡಿನೇಟರ್ ಸಂತೋಷ ಕುಮಾರ್ ಶೆಟ್ಟಿ, ಶಿಬಿರದ ನಿರ್ದೇಶಕ ಚಂದ್ರನಾಥ ಬಜಗೋಳಿ, ಸಂಪನ್ಮೂಲ ವ್ಯಕ್ತಿಗಳಾದ ದೇವದಾಸ್ ಕೆರೆಮನೆ, ಕೆ. ಅಶೋಕ್ ಕುಮಾರ್, ಸುಜಿತ್ ಕಾರ್ಕಳ, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ ಪರಸಪ್ಪ ಜೋಗಿನ, ಶಾಲಾ ಶಿಕ್ಷಕಿಯರಾದ ಮಧುಶ್ರೀ, ಅಶ್ವಿನಿ, ಶ್ರೇಯಾ ಹಾಗೂ ಶಾಲಾ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿಬಿರದ ನಿರ್ದೇಶಕ ಚಂದ್ರನಾಥ ಬಜಗೋಳಿಯವರನ್ನು ಅಭಿನಂದಿಸಲಾಯಿತು.
ಶಿಬಿರಾರ್ಥಿಗಳು ತಯಾರಿಸಿದ ಕ್ರಾಫ್ಟ್, ಮುಖವಾಡ, ಚಿತ್ರ ಕಲೆ ಸೇರಿದಂತೆ ವಿವಿಧ ಕಲಾ ಹಾಗೂ ಹಾಡು , ನಾಟಕಾಭಿನಯ ಪ್ರದರ್ಶನ ಮಾಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ ಸ್ವಾಗತಿಸಿದರು. ಪದವೀಧರ ಸಹ ಶಿಕ್ಷಕಿ ಪ್ರತಿಮಾ ದೇವದಾಸ್ ವಂದಿಸಿದರು. ಶಿಕ್ಷಕಿ ಪೂಜಾ ಕಾರ್ಯಕ್ರಮ ನಿರೂಪಿಸಿದರು.










