ಕಾರ್ಕಳ, ಅ.08: ಸ್ವಾತಂತ್ರ್ಯ ಹೋರಾಟಗಾರ, ಬುಡಕಟ್ಟು ಜನಾಂಗದ ನಾಯಕ ಬಿರ್ಸಾ ಮುಂಡಾ ಅವರ ಜಯಂತಿ ಆಚರಿಸುವಂತೆ ಉಡುಪಿ ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಿರ್ಸಾ ಮುಂಡಾ ಚಿಕ್ಕ ವಯಸ್ಸಿನಲ್ಲೇ ನಾಯಕತ್ವ ವಹಿಸಿದವರು. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಅನ್ಯಾಯಗಳ ಬಗ್ಗೆ ಜಾಗೃತಿ ಮೂಡಿಸಿ ಅವರ ಹಕ್ಕುಗಳ ಸಂರಕ್ಷಣೆ, ಸಾಂಸ್ಕೃತಿಕ ಸಂರಕ್ಷಣೆ ಮತ್ತು ಘನತೆಗೆ ಹೋರಾಡಿದ ಧೀಮಂತ ನಾಯಕ. ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ಪ್ರತಿಪಾದಿಸಿದರು.
1875ರ ನವೆಂಬರ್ 15 ರಂದು ಜಾರ್ಖಂಡ್ ನ ಉಲಿಹಾತುವಿನಲ್ಲಿ ಜನಿಸಿದ ಬಿರ್ಸಾ ಮುಂಡಾ ಬಳಿಕ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ್ದರು. 1900ರ ಜೂನ್ 5 ರಂದು ಸೆರೆಯಲ್ಲಿದ್ದಾಗ ತನ್ನ 25 ವರ್ಷ ವಯಸ್ಸಿನಲ್ಲಿ ಹುತಾತ್ಮರಾಗಿದ್ದರು. ಅವರ ಆದರ್ಶಗಳು ದೇಶದ ಜನರಿಗೆ ಹೆಮ್ಮೆ ಹಾಗೂ ಸ್ಫೂರ್ತಿಯ ಮೂಲವಾಗಿದೆ.ಆದ್ದರಿಂದ ಅವರ
ಜನ್ಮದಿನವಾದ ನವೆಂಬರ್ 15ರಂದು ರಾಜ್ಯ ಸರ್ಕಾರದ ವತಿಯಿಂದ ಬಿರ್ಸಾ ಮುಂಡಾ ಜಯಂತಿ ಆಚರಿಸುವಂತೆ ಗಂಗಾಧರ ಗೌಡ ಇವರು ಸರ್ಕಾರವನ್ನು ಆಗ್ರಹಿಸಿದ್ದಾರೆ.