ಬೆಂಗಳೂರು: ರಾಜ್ಯ ಸರ್ಕಾರ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಸಿವಿಲ್ ಸೇವಾ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಗಳಲ್ಲಿ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಿ ಸೋಮವಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ನಡೆಸುವ ನೇರ ನೇಮಕಾತಿಯಲ್ಲಿ ಭಾಗವಹಿಸುವ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೂ ಒಂದು ಬಾರಿಗೆ ಅನ್ವಯವಾಗುವಂತೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಆಯಾ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 3 ವರ್ಷಗಳ ಸಡಿಲಿಸಲಾಗಿದ್ದು, ಆದೇಶ ಹೊರಡಿಸಿದ ದಿನಾಂಕದ ನಂತರ ಮುಂದಿನ ದಿನಾಂಕ 31.12.2027ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳಂತೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ.
ಈಗ 5 ವರ್ಷ ವಯೋಮಿತಿ ಸಡಿಲಿಕೆ ಮಾಡುವಂತೆ ಜನಪ್ರತಿನಿಧಿಗಳು, ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹಾಕಿದ ಪರಿಣಾಮ ಸರ್ಕಾರ ಇದೀಗ 3 ವರ್ಷಗಳ ಸಡಿಲಿಕೆ ಮಾಡಿದೆ. ಈ ವಯೋಮಿತಿ ಸಡಿಲಿಕೆ 2027 ರ ಡಿಸೆಂಬರ್ 31ರೊಳಗೆ ಸರ್ಕಾರ ಹೊರಡಿಸುವ ಎಲ್ಲ ನೇರ ನೇಮಕಾತಿಗಳಿಗೂ ಕೇವಲ ಒಂದು ಬಾರಿ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೂ ಅನ್ವಯಿಸಲಿದೆ.