ಗೊರೂರು : ವಿದ್ಯಾರ್ಥಿಗಳ ಬದುಕು ಪರಿಪೂರ್ಣತೆಯನ್ನು ಪಡೆಯಲು ಕೇವಲ ಅಂಕಗಳಿಕೆ ಅಷ್ಟೇ ಸಾಧನವಾಗದು,ಬದಲಾಗಿ ಮಕ್ಕಳ ಮನೋವಿಕಾಸಕ್ಕೆ, ದೈಹಿಕ ಸಾಮರ್ಥ್ಯವೃದ್ಧಿಗೆ ಇಂತಹ ಅಭೂತಪೂರ್ವವಾದ ಸಾಂಸ್ಕೃತಿಕ ಚಟುವಟಿಕೆಗಳು ಆಸಕ್ತಿದಾಯಕವಾದ ಚೈತನ್ಯ ತುಂಬಬಲ್ಲದು,ಇಂದಿನ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯ ನಡುವೆಯೂ ಶಿಕ್ಷಣ ಸಂಸ್ಥೆಯೊಂದು ಇಂತಹ ಕಾರ್ಯಕ್ರಮಗಳನ್ನು ಕಾರ್ಯಯೋಜನೆಗೆ ತರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ಹಾಸನ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಅನುಪಮ ಕೆ ಆರ್ ಅಭಿಪ್ರಾಯಪಟ್ಟರು.
ಅವರು ಗೊರೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ 20ನೇ ವರ್ಷದ ಶಾಲಾ ವಾರ್ಷಿಕೋತ್ಸವದ
“ವಿವೇಕ ಸಂಗಮ 2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಹೊಳೆನರಸೀಪುರ ಸ್ಫೂರ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕಿ ಶ್ರೀಮತಿ ಮಹಾದೇವಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ರೂಪಿಸಿಕೊಳ್ಳುತ್ತದೆ ಮುಂದೆ ಇಂಥ ಕಾರ್ಯಕ್ರಮ ನೆರವೇರಿಸುವಲ್ಲಿ ಪೋಷಕರ ಸಹಕಾರ ವಿದ್ಯಾರ್ಥಿಗಳ ಉತ್ಸಾಹದ ಅಗತ್ಯತೆಯಿದೆ ಎಂದರು.
ಲೇಖಕಿ ಯುವ ಬರಹಗಾರ್ತಿ ರೇಷ್ಮಾ ಶೆಟ್ಟಿ ಗೊರೂರುರವರು ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪುಸ್ತಕದ ಜ್ಞಾನಕ್ಕಷ್ಟೇ ಸೀಮಿತವಾಗದೆ ಬದುಕಿಗೆ ಮುಖ್ಯವಾಗಿ ಬೇಕಾಗಿರುವಂತಹ ಸಂಸ್ಕಾರವಂತ ಶಿಕ್ಷಣವನ್ನು ಮೈಗೂಡಿಸಿಕೊಳ್ಳಬೇಕು,ಅಂತಹಸಂಸ್ಕಾರವಂತ ಶಿಕ್ಷಣವನ್ನು ನೀಡುತ್ತಿರುವ ವಿವೇಕಾನಂದ ವಿದ್ಯಾ ದೇಗುಲ 20ರ ಸಂಭ್ರಮದಂತೆ ನೂರರ ಸಂಭ್ರಮಕ್ಕೂ ಸಾಕ್ಷಿಯಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಶೇಷ ಸಾಧನೆಗೈದ ಸಾಧಕರುಗಳಾದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲರಾದ ಅತ್ನಿ ಕೃಷ್ಣಯ್ಯ, ಭಾರತ ಕ್ರೀಡಾ ಪ್ರಾಧಿಕಾರದ ನಿವೃತ್ತ ಪ್ರಾದೇಶಿಕ ನಿರ್ದೇಶಕ ನಟರಾಜ್,ಎಲ್ ಐ ಸಿ ಯ ಸಹಾಯಕ ಆಡಳಿತಾಧಿಕಾರಿ ಎಚ್ ಆರ್ ಯೋಗೇಶ್, ಸೈನಿಕ ಸೇವೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆಯ ಪೂರ್ವ ವಿದ್ಯಾರ್ಥಿ ತೇಜಸ್ ಹಾಗೂ ಶೈಕ್ಷಣಿಕ ಸಾಧನೆಗೈದ ಪೂರ್ವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹಾಗೂ ಶಾಲಾ ವಾರ್ಷಿಕೋತ್ಸವದ ನಿಮಿತ್ತ ನಡೆಸಿದ ಅಂತರ್ ಶಾಲಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ,ಸಂಸ್ಥೆಯ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ,ಬಹುಮಾನ
ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ನಿಂಗರಾಜು ಸದಸ್ಯರಾದ ಜಗದೀಶ್ ರಾಮಘಟ್ಟ, ಬಂಗಾರಿ ಗೌಡ್ರು, ಕಮಲಾಕ್ಷಮ್ಮ,ವಕೀಲರಾದ ಪುರುಷೋತ್ತಮ್ ಗೊರೂರು,
ಶಿಲ್ಪಶ್ರೀ ಕಾನ್ವೆಂಟ್ ನ ಪ್ರಾಂಶುಪಾಲರು ರೇಣುಕೇಶ್, ತಾಲೂಕ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪುಣ್ಯವತಿ,ಯುವ ಕಾಂಗ್ರೆಸ್ ಮುಖಂಡ ರಂಜಿತ್ ಗೊರೂರು, ಮಂಜುನಾಥ್ ಗೊರೂರು ಹಾಗೂ ಅನೇಕರು ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ ಎಚ್ ವೈ ಚಂದ್ರಶೇಖರ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ ಕಾರ್ಯಕ್ರಮದ ಯಶಸ್ಸನ್ನು ಕೊಂಡಾಡಿದರು.
ಸಂಸ್ಥೆಯ ಶಿಕ್ಷಕರುಗಳಾದ ಮಂಜುಳಾ, ಶಾಂಭವಿ,ತಾಸಿನ ಬಾನು, ಪೂಜಾ, ಸಮೀನಾ ತಾಜ್, ಸಭಿಹಾ,ಜುಬೇದ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತು ಯಶಸ್ಸಿಗೆ ಶ್ರಮಿಸಿದರು.
ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶಬಾನ ಗೊರೂರು ಅವರು ಸಂಸ್ಥೆಯ 20 ವರ್ಷದ ಸಾಧನೆಯ ವರದಿವಾಚನ ನೆರವೇರಿಸಿದರು. ಚನ್ನರಾಯಪಟ್ಟಣ ವಿದ್ಯಾಸಂಸ್ಥೆಯ ಗಣಿತ ಉಪನ್ಯಾಸಕರಾದ ರತ್ನಾಕರ್ ಎಂಜೆ ರವರು ಕಾರ್ಯಕ್ರಮದಲ್ಲಿ ಸರ್ವರನ್ನು ಸ್ವಾಗತಿಸಿದರು ಪ್ರಾರ್ಥನೆಯನ್ನು ಶ್ರೀಮತಿ ಶುಭ ಹೆಬ್ಬಾಳ ನೆರವೇರಿಸಿಕೊಟ್ಟರು, ಹಾಗೂ ಶಾಲಾ ಆಡಳಿತಾಧಿಕಾರಿಯಾಗಿ ವಿಶೇಷ ಜವಾಬ್ದಾರಿ ಹೊತ್ತ ನವೀನ್ ಕುಮಾರ್ ಗೊರೂರು ಅವರು ಕಾರ್ಯಕ್ರಮದ ನಿರ್ವಹಣೆಯನ್ನು ನೆರವೇರಿಸಿದರು,ಭೋದಕೇತರ ಸಿಬ್ಬಂದಿಗಳ ಸಂಪೂರ್ಣ ಸಹಕಾರದೊಂದಿಗೆ ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ, ಪೂರ್ವವಿದ್ಯಾರ್ಥಿಗಳಿಂದ ಹಾಗೂ ಪೋಷಕರಿಂದ ವಿವಿಧ ವಿನೋದಾವಳಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುದರ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.

