ಬೆಂಗಳೂರು:ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎನ್ನುತ್ತಿರುವ ಸಿಎಂ ಸಿದ್ಧರಾಮಯ್ಯ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹರಸಾಹಸಪಡುತ್ತಿದ್ದಾರೆ. ಈ ನಡುವೆ ಕಳೆದ ವರ್ಷದಂತೆ ಈ ವರ್ಷವೂ ಕೂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ಉಚಿತ ಗ್ಯಾರಂಟಿ ಯೋಜನೆಗಳಿಗೆ ಬಳಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಸರ್ಕಾರದ ಈ ನಡೆಗೆ ಪ್ರತಿಪಕ್ಷ ಬಿಜೆಪಿ ಹಾಗೂ ದಲಿತಪರ ಸಂಘಟನೆಗಳು ತೀವೃ ವಿರೋಧ ವ್ಯಕ್ತಪಡಿಸುತ್ತಿವೆ.
2025-26ರ ಸಾಲಿನಲ್ಲಿ 42,017.51 ಕೋ.ರೂ ಅನುದಾನವನ್ನು ಎಸ್‌ಸಿಎಸ್‌ಪಿ-ಟಿಎಸ್‌ಪಿ (ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ) ಯೋಜನೆಯಡಿ ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿರಿಸಲಾಗಿದೆ. ಈ ಪೈಕಿ 11,896.84 ಕೋಟಿ ರೂ. ಮೊತ್ತವನ್ನು ಗ್ಯಾರಂಟಿ ಯೋಜನೆಗೆ ಬಳಸಲು ಸರ್ಕಾರ ಚಿಂತನೆ ನಡೆಸಿದೆ.
ಗ್ಯಾರಂಟಿ ಯೋಜನೆಗೆ ಬಳಕೆಯಾಗುವ ಅನುದಾನ ಎಷ್ಟು?
ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಯಿಂದ ಯುವನಿಧಿ ಯೋಜನೆಗೆ 162 ಕೋಟಿ ರೂಪಾಯಿ, ಗೃಹಲಕ್ಷ್ಮೀ ಯೋಜನೆಗೆ 7,438 ಕೋಟಿ ರೂ., ಗೃಹಜ್ಯೋತಿಗೆ 2,626 ಕೋಟಿ ರೂ., ಶಕ್ತಿ ಯೋಜನೆಗೆ 1,537 ಕೋಟಿ ರೂ. ಹಾಗೂ ಅನ್ನಭಾಗ್ಯಕ್ಕೆ 1,670 ಕೋಟಿ ರೂ. ಬಳಕೆಗೆ ಸರ್ಕಾರ ಮುಂದಾಗಿದೆ.
ಈ ಕುರಿತು ಆಗಸ್ಟ್ 5ರಂದು ಎಸ್‌ಸಿ, ಎಸ್‌ಟಿ ಅಭಿವೃದ್ಧಿ ಪರಿಷತ್ ಸಭೆ ನಿಗದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಯಿಂದ ಗ್ಯಾರಂಟಿಗಳಿಗೆ ಅನುದಾನ ಬಳಸಿಕೊಳ್ಳುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಕಳೆದ ಹಣಕಾಸು ವರ್ಷದಲ್ಲಿಯೂ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನದಲ್ಲಿ 9,797 ಕೋ.ರೂ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿತ್ತು. ಸರ್ಕಾರದ ಈ ನಡೆಗೆ ದಲಿತ ಸಂಘಟನೆಗಳು, ವಿಪಕ್ಷಗಳು ತೀವೃ ಆಕ್ರೋಶ ವ್ಯಕ್ತಪಡಿಸಿದ್ದವು. ಕಳೆದ ಬಾರಿಯ ಅಧಿವೇಶನದಲ್ಲಿ ಕೂಡ ಇದೇ ವಿಚಾರಕ್ಕೆ ಜಟಾಪಟಿ ಆಗಿತ್ತು.