Share this news

ಕಾರ್ಕಳ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಇನ್ನಿಲ್ಲದ ಹೆಣಗಾಟ ನಡೆಸುತ್ತಿದೆ. ಕಳೆದ 4 ತಿಂಗಳಿನಿಯ ಗೃಹಲಕ್ಷ್ಮೀ ಯೋಜನೆಯ ಹಣ ಬರುತ್ತಿಲ್ಲ,ಗ್ಯಾರಂಟಿ ಯೋಜನೆಗಳಿಗಾಗಿ ಹಣಕಾಸು ಹೊಂದಾಣಿಕೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡೆಸಿ ಜನಸಾಮಾನ್ಯರ ಬದುಕು ಬೀದಿಗೆ ಬಿದ್ದ ಬೆನ್ನಲ್ಲೇ ಇದೀಗ ರಸ್ತೆಯಲ್ಲಿ ಓಡಾಡುವವರ ಮೇಲೂ ಕಾಂಗ್ರೆಸ್ ತೆರಿಗೆ ವಿಧಿಸಲು ಮುಂದಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸುನಿಲ್ ಕುಮಾರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬೆಳ್ಳಣ್ ಸಮೀಪದ ಕಂಚಿನಡ್ಕ ಎಂಬಲ್ಲಿ ಟೋಲ್ ಸ್ಥಾಪಿಸಿ, ಸುಂಕ ಸಂಗ್ರಹ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ಸಿನಿಂದ ಎರಡು ದಿನದ ಹಿಂದೆ ಪ್ರತಿಭಟನೆ ನಡೆದಿತ್ತು. ಕಾಂಗ್ರೆಸ್ ಮುಖಂಡ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತ್ರತ್ವದಲ್ಲಿ ಪ್ರತಿಭಟನೆ ನಡೆದಿತ್ತು. ನಿಮ್ಮದೇ ಸರಕಾರದ ವಿರುದ್ಧ ನೀವೇ ಬೀದಿಗಿಳಿದು ಪ್ರತಿಭಟಿಸುವುದು ನೋಡಿದರೆ ನಿಮ್ಮ ಸರಕಾರದ ಸಚಿವರುಗಳು ನಿಮ್ಮ ಕೈಗೆ ಸಿಗುತಿಲ್ಲ. ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇದನೆಲ್ಲ ಗಮನಿಸುವಾಗ ಕಾಂಗ್ರೆಸ್ ಸರಕಾರ ಸಂಪೂರ್ಣ ಕೋಮಾ ಸ್ಥಿತಿಗೆ ತಲುಪಿದೆ ಎನ್ನುವುದನ್ನು ಗೊತ್ತಾಗುತ್ತದೆ. ನಿಮ್ಮದೇ ಸರಕಾರದ ವಿರುದ್ಧ ನೀವೆ ಪ್ರತಿಭಟನೆಗೆ ಬೀದಿಗಿಳಿದಿದ್ದೀರಿ. ಇಂತಹದ್ದೊಂದು ಹೀನಾಯ ಪರಿಸ್ಥಿತಿ ಕಾಂಗ್ರೆಸ್ಸಿಗೆ ಈಗ ಬಂದಿದೆ. ಕಾಂಗ್ರೆಸ್ಸಿನ ಮಾಜಿ ಜನಪ್ರತಿನಿಧಿಗಳು, ಸ್ಥಳೀಯ ನಾಯಕರು ಕಾರ್ಯಕರ್ತರು ಗೊಂದಲದಲ್ಲಿದ್ದು ಯಾರಿಗೆ ಮನವಿ ಕೊಡುವುದು ಎನ್ನುವುದು ಸಹ ತಿಳಿಯದ ಸ್ಥಿತಿ ಈಗ ಕಾಂಗ್ರೆಸ್ಸಿಗರಿಗೆ ಬಂದಿದೆ. ತಮ್ಮದೇ ಸರಕಾರ ಆಡಳಿತದಲ್ಲಿದೆ ಎನ್ನುವ ಗೊಡವೆಯೂ ಕಾಂಗ್ರೆಸ್ಸಿಗರಿಗಿಲ್ಲ ಎಂದು ಸುನಿಲ್ ಲೇವಡಿ ಮಾಡಿದ್ದಾರೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಟೋಲ್ ಸಂಗ್ರಹ ವಿಚಾರ ಪ್ರಸ್ತಾಪವಾದಾಗ ಅದಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಿಯರ ಅಭಿಪ್ರಾಯ ಪಡೆದು ಬಳಿಕ ಟೋಲ್ ಸಂಗ್ರಹ ನಿರ್ಧಾರ ವಾಪಸ್ ಪಡೆಯುವಂತೆ ಮಾಡಲಾಗಿತ್ತು. ಆದರೆ ಈಗ ರಾಜ್ಯ ಸರಕಾರದ ಬೊಕ್ಕಸ ಬರಿದಾಗಿದ್ದು ಗ್ಯಾರಂಟಿ ಹಣ ತುಂಬಲು ಟೋಲ್ ಕರ ಸಂಗ್ರಹ ಮೂಲಕ ರಸ್ತೆ ವಸೂಲಾತಿಗೆ ಇಳಿದಿದೆ. ವಾಹನ ಸವಾರರಿಗೆ ಬರೆ ಎಳೆಯಲು ಮುಂದಾಗಿದೆ ಎಂದಿದ್ದಾರೆ. ಸರಕಾರ ಈ ಕೂಡಲೇ ಪಡುಬಿದ್ರಿ- ಕಾರ್ಕಳ ನಡುವೆ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ನಿರ್ಧಾರ ಕೈ ಬಿಡುವಂತೆ ಅವರು ಆಗ್ರಹಿಸಿದ್ದಾರೆ.ಜನವಿರೋಧದ ನಡುವೆಯೂ ಜಾರಿಗೆ ಮುಂದಾದರೆ ಮುಂದೆ ತೀವ್ರ ಪ್ರತಿರೋಧ ಎದುರಿಸಬೇಕಾದಿತು ಎಂದು ಸುನಿಲ್ ಕುಮಾರ್ ಸರ್ಕಾರವನ್ನು ಎಚ್ಚರಿಸಿದ್ದಾರೆ.

                        

                          

                        

                          

 

`

Leave a Reply

Your email address will not be published. Required fields are marked *