ಬೆಂಗಳೂರು, 07: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದ್ದು, ಈ ಬಾರಿ 10ನೇ ತರಗತಿ ವಾರ್ಷಿಕ ಪರೀಕ್ಷಾ ಶುಲ್ಕವನ್ನು 5% ಏರಿಕೆ ಮಾಡಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ.
ಪ್ರಥಮ ಬಾರಿಗೆ ಹಾಜರಾಗುವ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ 676 ರೂ.ನಿಂದ 710 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಅದರನ್ವಯ 2025-26ನೇ ಸಾಲಿನಲ್ಲಿ ನಡೆಯಲಿರುವ ಎಲ್ಲಾ ಪರೀಕ್ಷೆಗಳಿಗೆ ಪ್ರಸ್ತುತ ಇರುವ ದರಕ್ಕೆ ಶೇ.5 ರಷ್ಟು ಸೇರಿಸಿ ಶುಲ್ಕ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಥಮ ಬಾರಿ ಹಾಜರಾಗುವ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ – 676 ರೂ. ನಿಂದ 710 ರೂ.ಗೆ ಹೆಚ್ಚಳ. ಹೊಸದಾಗಿ ನೋಂದಣಿಯಾಗುವ ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ ಹಾಗೂ ಅರ್ಜಿ ಶುಲ್ಕ 236 ರೂ. ನಿಂದ 248 ರೂ.ಗೆ ಹೆಚ್ಚಳ.
ಈಗಾಗಲೇ ಖಾಸಗಿ ಅಭ್ಯರ್ಥಿಯಾಗಿ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕ – 69 ರೂ. ನಿಂದ 72 ರೂ.ಗೆ ಹೆಚ್ಚಳ ಮಾಡಲಾಗಿದೆ. ಒಂದು ವಿಷಯಕ್ಕೆ- 427 ರೂ ನಿಂದ 448 ರೂಗೆ ಹೆಚ್ಚಳ. ಎರಡು ವಿಷಯಕ್ಕೆ -532 ರೂನಿಂದ 559 ರೂಗೆ ಹೆಚ್ಚಳ. ಮೂರು ಮತ್ತು ಮೂರಕ್ಕಿಂತ ಜಾಸ್ತಿ ವಿಷಯಗಳಿಗೆ 716 ರೂ. ನಿಂದ 752 ರೂ.ಗೆ ಹೆಚ್ಚಳ ಮಾಡಲಾಗಿದೆ.
ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದು, ಶಿಕ್ಷಣ ಇಲಾಖೆಯ ಈ ನಿರ್ಧಾರದಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಸಮಾಜಾಯಿಷಿ ನೀಡಿದ್ದು, ಉತ್ತರಪತ್ರಿಕೆಗಳ ಮೌಲ್ಯಮಾಪನ, ಮತ್ತು ಇತರ ಸಂಬಂಧಿತ ಆಡಳಿತಾತ್ಮಕ ವೆಚ್ಚಗಳು ಕಾಲಕಾಲಕ್ಕೆ ಏರುತ್ತಿರುವುದರಿಂದ ಈ ಕ್ರಮ ಅಗತ್ಯವೆಂದು ಪರಿಗಣಿಸಲಾಗಿದೆ. ಹಲವು ವರ್ಷಗಳಿಂದ ಪರೀಕ್ಷಾ ಶುಲ್ಕವನ್ನು ಪರಿಷ್ಕರಣೆ ಮಾಡಿರಲಿಲ್ಲ. ಆದ್ರೆ, ಇದೀಗ ವೆಚ್ಚಗಳು ಹೆಚ್ಚಳವಾಗುತ್ತಿರುವುದರಿಂದ ಪರೀಕ್ಷಾ ಶುಲ್ಕ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದಿದೆ.