ಕಾರ್ಕಳ:ಕಳೆದ ಸುಮಾರು 6 ತಿಂಗಳಿನಿಂದ ಹೈನುಗಾರರಿಗೆ ನಯಾಪೈಸೆ ಹಾಲಿನ ಪ್ರೋತ್ಸಾಹಧನ ಬಿಡುಗಡೆಯಾಗಿಲ್ಲ,ಈಗಾಗಲೇ ಹೈನುಗಾರಿಕೆ ನಷ್ಟದಲ್ಲಿದ್ದು ಇದರ ನೇರ ಪರಿಣಾಮ ಹಾಲಿನ ಒಕ್ಕೂಟದ ಮೇಲೆ ಬೀಳುತ್ತದೆ ಮಾತ್ರವಲ್ಲದೇ ರೈತರು ಹೈನುಗಾರಿಕೆಯಿಂದ ವಿಮುಖರಾಗುವುದು ನಿಶ್ಚಿತ ಆದ್ದರಿಂದ ಸರ್ಕಾರ ತಕ್ಷಣವೇ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹಧನ ಬಿಡುಗಡೆಗೊಳಿಸಬೇಕಿದೆ ಎಂದು ಕಾರ್ಕಳ ತಾಲೂಕು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಗೋವಿಂದರಾಜ್ ಭಟ್ ಒತ್ತಾಯಿಸಿದರು.
ಕಾರ್ಕಳ ಭಾ.ಕಿ.ಸಂ ಕಚೇರಿಯಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರ ಪ್ರೋತ್ಸಾಹಧನವನ್ನು ಬಿಡುಗಡೆಗೊಳಿಸಿ ಎಂದು ರೈತರ ನಿರಂತರ ಹಕ್ಕೋತ್ತಾಯಕ್ಕೂ ಸರಕಾರ ಯಾವುದೇ ಮನ್ನಣೆ ಈವರೆಗೆ ನೀಡಿಲ್ಲ. ಮಾತ್ರವಲ್ಲದೇ ಇದೇ ರೀತಿ ಪರಿಸ್ಥಿತಿ ಮುಂದುವರೆದಲ್ಲಿ ಹೈನುಗಾರರ ಒಕ್ಕೂಟಕ್ಕೆ ತೀವ್ರವಾದಂತಹ ಹೊಡೆತ ಬೀಳುವ ದಿನಗಳು ದೂರವಿಲ್ಲ.ಹಾಲು ಉತ್ಪಾದನಾ ವೆಚ್ಚ ಹೆಚ್ಚಳದಿಂದ ದೊಡ್ಡಮಟ್ಟದ ಹೈನುಗಾರಿಕೆ ನಡೆಸುವವರು ಹಾಲು ಉತ್ಪಾದನೆಯಿಂದ ವಿಮುಖರಾಗುತ್ತಿದ್ದಾರೆ. ಇದಲ್ಲದೇ ಕೆಲವು ರೈತರು ಒಟ್ಟುಗೂಡಿ ಸಣ್ಣ ಪ್ರಮಾಣದ ಪ್ಯಾಂಕಿಗ್ ಘಟಕವನ್ನು ಸ್ಥಳೀಯ ಮಟ್ಟದಲ್ಲೇ ಹಾಲು ವಿತರಿಸುವ ಕುರಿತು ತಮ್ಮ ಒಲವು ವ್ಯಕ್ತ ಪಡಿಸುತ್ತಿದ್ದಾರೆ.
ಪ್ರತೀ ಚುನಾವಣಾ ಸಂದರ್ಭಗಳಲ್ಲಿ ರೈತರು ತಾವು ಬೆಳೆ ರಕ್ಷಣೆಗೆ ಪಡೆದ ಬಂದೂಕುಗಳನ್ನು ಠೇವಣಿ ಇಡುವುದರಿಂದ ವಿನಾಯಿತಿಯನ್ನು ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬರುತ್ತಿದ್ದು ಈ ವರ್ಷ ದಕ್ಷಿಣ ಕನ್ನಡದ ಕೆಲವು ರೈತರು ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿ ಹೋರಾಟಮಾಡಿ ಜಯ ಸಾಧಿಸಿದ್ದಾರೆ. ಆ ಪ್ರಕಾರವಾಗಿ ಘನ ನ್ಯಾಯ ಪೀಠವು ಇನ್ನು ಮುಂದಿನ ದಿನಗಳಲ್ಲಿ ಸಾರಾಸಗಟಾಗಿ ಕೋವಿಗಳನ್ನು ಠೇವಣಿ ಇಡುವಂತೆ ಸೂಚಿಸಬಾರದು ಎಂದು ತೀರ್ಪು ನೀಡಿರುತ್ತದೆ. ಅಲ್ಲದೆ ಚುನಾವಣಾ ಆಯೋಗವು ಈ ಹಿಂದೆಯೇ ಕೋವಿ ಠೇವಣಿ ಇಡುವುದರ ಬಗ್ಗೆ ಮಾರ್ಗಸೂಚಿಉನ್ನು ಸ್ಪಷ್ಟವಾಗಿ ನಿಗದಿ ಮಾಡಿದ್ದು, ಅದರಲ್ಲಿಯೂ ಕೂಡಾ ಅಪರಾಧಿಗಳು ಮತ್ತು ಜಾಮೀನಿನಲ್ಲಿ ಹೊರಗೆ ಇರುವ ವ್ಯಕ್ತಿಗಳಿಂದ ಮಾತ್ರ ಕೋವಿ ಠೇವಣಿ ಇರಿಸಿಕೊಳ್ಳಬೇಕೆಂದು ನಿರ್ದೇಶನವಿರುತ್ತದೆ. ಆದರೆ ಸಂಬAಧಪಟ್ಟ ಇಲಾಖೆಗಳು ಈ ಮಾರ್ಗಸೂಚಿಯನ್ನು ಈವರೆಗೆ ಅನುಸರಿಸದೆ ಇರುವುದರಿಂದ ಪ್ರತೀ ಚುನಾವಣಾ ಸಂದರ್ಭದಲ್ಲಿ ರೈತರು ಕಷ್ಟಗಳನ್ನು ಎದುರಿಸಬೇಕಾಯಿತು. ಈ ವರ್ಷವಂತೂ ಬೆಳೆ ಕಟಾವಿನ ಸಂದರ್ಭದಲ್ಲಿಯೇ ಚುನಾವಣೆ ಬಂದ ಕಾರಣಕ್ಕಾಗಿ ರೈತರು ನೀತಿಸಂಹಿತೆಯ ಸಂದರ್ಭದಲ್ಲಿ ಸುಮಾರು 30 ಸಾವಿರದಿಂದ 1 ಲಕ್ಷದವರೆಗೆ ಕಾಡು ಪ್ರಾಣಿಗಳ ಉಪಟಳದಿಂದ ನಷ್ಟವನ್ನು ಅನುಭವಿಸುವಂತಾಗಿದೆ. ಈ ಎಲ್ಲಾ ವಿಚಾರಗಳನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದ ಕಾರಣಕ್ಕಾಗಿ ವಿನಾಯಿತಿ ಕೇಳಿದಂತಹ ಕೆಲವು ರೈತರಿಗೆ ಕೋವಿ ವಾಪಾಸು ನೀಡಿರುವುದು ನಮ್ಮ ಹೋರಾಟಕ್ಕೆ ಸಂದ ಗೌರವವೇ ಆಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ್ ಭಟ್ ಇರ್ವತ್ತೂರುರವರು ಮಾತನಾಡಿ ನಾವು ರೈತರು ನಾವು ಉತ್ಪಾದಿಸುವ ಹಾಲಿನ ಮೌಲ್ಯವರ್ಧನಗೊಳಿಸಿ ಹೆಚ್ಚಿನ ದರ ಪಡೆದುಕೊಳ್ಳುವ ಬಹಳ ಉತ್ತಮ ಅವಕಾಶವಿದ್ದಲ್ಲಿ ಅದನ್ನು ಎಲ್ಲರೂ ಸದುಪಯೋಗ ಪಡೆಸಿಕೊಳ್ಳುವಂತೆ ವಿನಂತಿಸಿದರು.
ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್‌ರವರು ಮಾತನಾಡಿ, ಹವಾಮಾನ ಆಧಾರಿತ ಬೆಳೆವಿಮೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು ಹಾಗೂ ಈ ತಿಂಗಳ 15ನೇ ತಾರೀಖಿನ ನಂತರ 30ರ ಒಳಗೆ ವಿಮಾ ಕಂತು ಪಾವತಿಯ ಪ್ರಕ್ರೀಯೆಗಳು ಕೊನೆಗೊಳ್ಳುತ್ತದೆ ಎಂದು ತಿಳಿಸಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಅಡಿಕೆ ಮತ್ತು ಕಾಳುಮೆಣಸಿಗೆ ಇರುವ ಈ ವಿಮಾ ವ್ಯವಸ್ಥೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಾಧ್ಯಕ್ಷ ಸುಂದರ ಶೆಟ್ಟಿ ಮುನಿಯಾಲು, ಕೆ.ಪಿ.ಭಂಡಾರಿ ಕೆದಿಂಜೆ, ಮೋಹನದಾಸ ಅಡ್ಯಂತಾಯ, ಶ್ರೀಮತಿ ನಿರ್ಮಲ ಮಿಯ್ಯಾರು, ವಿಜಯಲಕ್ಷ್ಮಿ ಕಡ್ತಲ, ವೃಷಭ್ ಕುಮಾರ್, ಮಂಜುನಾಥ ನಾಯಕ್, ಕರುಣಾಕರ ಕಡಂಬ, ಕರುಣಾಕರ ವಿ ಶೆಟ್ಟಿ ಬೋಳಾ, ಅನಂತ್ ಭಟ್ ಇರ್ವತ್ತೂರು, ಶೇಖರ್ ಶೆಟ್ಟಿ ನೀರೆ ಹಾಗೂ ಗ್ರಾಮ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ಕಾರ್ಯಕ್ರಮ ನಿರೂಪಿಸಿದರು