ಬೆಂಗಳೂರು: ಇತ್ತೀಚೆಗಷ್ಟೇ ನಿಯಮ ಉಲ್ಲಂಘನೆ ಆರೋಪದ ಮೇರೆಗೆ ಸ್ಥಗಿತವಾಗಿದ್ದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ. ಡಿಸಿಎಂ ಡಿಕೆ ಶಿವಕುಮಾರ್ ಮಧ್ಯಸ್ಥಿಕೆ ವಹಿಸಿದ್ದು, ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್ ಸ್ಟುಡಿಯೋಸ್ಗೆ ಮತ್ತೊಂದು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪದ ಮೇಲೆ ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ಮನೆಯನ್ನು ಸರ್ಕಾರದಿಂದ ಸೀಜ್ ಮಾಡಲಾಗಿತ್ತು. ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ‘ಜಾಲಿವುಡ್ ಸ್ಟುಡಿಯೋಸ್ಗೆ ‘ಇದೊಂದು ಬಾರಿ ಅನುಮತಿ ನೀಡುವಂತೆ’ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉದ್ಯೋಗ ಮುಖ್ಯ, ಏನೇ ಇದ್ದರೂ ಅವರಿಗೊಂದು ಅವಕಾಶ ಕೊಡಿ. ಅವರು ಸಮಸ್ಯೆ ಬಗೆಹರಿಸಿಕೊಳ್ಳಲಿ. ನಮ್ಮಲ್ಲಿ ಮನೋರಂಜನೆ ಕೂಡ ಮುಖ್ಯ ಎಂದು ಹೇಳಿದ್ದಾರೆ.
ಜಾಲಿವುಡ್ ಸ್ಟುಡಿಯೋಸ್ ಓಪನ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ನಟ ಸುದೀಪ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸರಿಯಾದ ಸಮಯಕ್ಕೆ ಬೆಂಬಲ ನೀಡಿದ್ದಕ್ಕಾಗಿ ನಾನು ಗೌರವಾನ್ವಿತ ಡಿಕೆ ಶಿವಕುಮಾರ್ ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಹೇಳುತ್ತೇನೆ. ಹಾಗೇ ಇತ್ತೀಚೆಗೆ ನಡೆದ ಅವಾಂತರದಲ್ಲಿ ಬಿಗ್ ಬಾಸ್ ಕನ್ನಡ ಭಾಗಿಯಾಗಿಲ್ಲ ಹಾಗೂ ಅದರ ಭಾಗವಾಗಿಲ್ಲ ಎಂದು ತಿಳಿಸಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೂ ಧನ್ಯವಾದ ಹೇಳಲು ಬಯಸುತ್ತೇನೆ.ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನನ್ನ ಕರೆಗೆ ಪ್ರತಿಕ್ರಿಯಿಸಿದ್ದಾಗಿ ನಾನು ಅವರನ್ನು ಪ್ರಶಂಶಿಸುತ್ತೇನೆ. ನಲಪಾಡ್ ಅವರ ಪ್ರಯತ್ನಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಬಿಗ್ ಬಾಸ್ ಕನ್ನಡ 12 ಮುಂದುವರೆಯುತ್ತೆ ಎಂದು ಹೇಳಿದ್ದಾರೆ.