ಕಾರ್ಕಳ,ಸೆ.08: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ‘ ಕ್ರಿಯೇಟಿವ್ ಗುರುದೇವೋಭವ ‘ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜ್ಞಾನ ಜ್ಯೋತಿಯನ್ನು ಬೆಳಗಿ, ಡಾ. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.
ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ‘ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರ ಪಾತ್ರ ಇನ್ನಷ್ಟು ಮಹತ್ತರವಾಗಿದೆ. ವಿದ್ಯಾರ್ಥಿಗಳಲ್ಲಿ ಮೌಲ್ಯಗಳು, ಸಂಸ್ಕಾರ, ಶಿಸ್ತು ಹಾಗೂ ಮಾನವೀಯತೆ ಬೆಳೆಸುವುದು ಶಿಕ್ಷಕರ ಮಹತ್ತರ ಜವಾಬ್ದಾರಿ’ ಎಂದು ನುಡಿದರು.
ಗುರುವಂದನೆಯನ್ನು ಸ್ವೀಕರಿಸಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಪಲಾಯಿ ಬಾಕ್ಯಾರು, ತೆಳ್ಳಾರುವಿನ ಶಿಕ್ಷಕ ಕೆ. ಯೋಗೀಶ್ ಕಿಣಿ ಯವರು ಮಾತನಾಡಿ ‘ ಇಂದಿನ ಪೀಳಿಗೆಗೆ ಶಿಕ್ಷಕರು ಕೇವಲ ಪಾಠ ಬೋಧಕರು ಮಾತ್ರವಲ್ಲ, ಬಾಳಿನ ದಾರಿ ತೋರಿಸುವ ದೀಪಸ್ತಂಭರೂ ಆಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಅನನ್ಯ’ ಎಂದು ಹೇಳಿದರು.
‘ ಅಮ್ಮನ ನೆರವು ‘ ಚಾರಿಟೇಬಲ್ ಟ್ರಸ್ಟ್ (ರಿ) ಕಾರ್ಕಳ ಇಲ್ಲಿನ ಅಧ್ಯಕ್ಷರಾದ ಅವಿನಾಶ್ ಜಿ. ಶೆಟ್ಟಿಯವರು ‘ ಶಿಕ್ಷಕರ ಸೇವೆ ಶಾಶ್ವತ. ಅವರು ಬಿತ್ತುವ ಜ್ಞಾನ ಬೀಜ ಯಾವಾಗಲೂ ಫಲವನ್ನು ನೀಡುತ್ತದೆ. ಸಮಾಜದ ಪ್ರಗತಿಗೆ ಶಿಕ್ಷಕರು ಅವಿಭಾಜ್ಯ ಅಂಗ ‘ಎಂದು ಗುರುಗಳ ಸಮರ್ಪಣೆಯನ್ನು ಹೊಗಳಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಅಂಗಸಂಸ್ಥೆಯಾದ ತ್ರಿಶಾ ಪದವಿ ಪೂರ್ವ ಕಾಲೇಜು, ಕಲ್ಯಾಣಪುರ, ಉಡುಪಿಯ ಪ್ರಾಂಶುಪಾಲರಾಗಿರುವ ರಾಮಕೃಷ್ಣ ಹೆಗಡೆ, ಕಾಲೇಜಿನ ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಲೋಹಿತ್ ಎಸ್.ಕೆ, ರಸಾಯನಶಾಸ್ತ್ರ ಉಪನ್ಯಾಸಕರಾದ ಮಲ್ಲಿಕಾರ್ಜುನ ಜಿ. ರಾವ್, ಕನ್ನಡ ವಿಭಾಗ ಮುಖ್ಯಸ್ಥರಾದ ಶಿವಕುಮಾರ್ ರವರನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ರವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ‘ ಗುರುಗಳ ಗೌರವವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಅವರ ಮಾರ್ಗದರ್ಶನದಲ್ಲಿ ಕಲಿತು, ಸಮಾಜದ ಉತ್ತಮ ನಾಗರಿಕರಾಗಬೇಕು ‘ ಎಂಬ ಸಂದೇಶವನ್ನು ನೀಡಿದರು.
ಎಲ್ಲಾ ಉಪನ್ಯಾಸಕ ವರ್ಗದವರಿಗೆ ಸಂಸ್ಥೆಯ ವತಿಯಿಂದ ಸವಿನೆನಪಿನ ಉಡುಗೊರೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಸಪ್ತ ಸಂಸ್ಥಾಪಕರು, ಬೋಧಕ- ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಹಿಂದಿ ಭಾಷಾ ಉಪನ್ಯಾಸಕಿ ವೃಂದಾದಾತೆ ಯವರು ಉಪನ್ಯಾಸಕರ ಯಾದಿಯನ್ನು ಓದಿದರು. ಹಿಂದಿ ಭಾಷಾ ಮುಖ್ಯಸ್ಥ ವಿನಾಯಕ ಜೋಗ್ ರವರು ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.