ಅಜೆಕಾರು: ಭಗವಂತನನ್ನು ಕಾಣಬೇಕಾದರೆ ನಮ್ಮ ಅಂತರಂಗದ ಶುದ್ಧಿಯಾಗಬೇಕು. ನಮ್ಮೊಳಗಿನ ಕಾಮ,ಕ್ರೋಧ,ಮದ,ಮತ್ಸರಾದಿ ಅರಿಷಡ್ವರ್ಗಗಳನ್ನು ತ್ಯಜಿಸಿದಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗಲು ಸಾಧ್ಯ ಎಂದು ಉಡುಪಿ ಸೋದೆ ವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು. ಅವರು ಗುರುವಾರ ಎಣ್ಣೆಹೊಳೆ ಹಂಚಿಕಟ್ಟೆ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.ದೇವಸ್ಥಾನಗಳು ,ಮಠ ಮಂದಿರಗಳು ಕೇವಲ ಶ್ರದ್ಧಾಭಕ್ತಿಯ ಕೇಂದ್ರವಾಗಿರದೇ, ಸಮಾಜವನ್ನು ಸಂಘಟಿಸುವ ಜತೆಗೆ ಬ್ರಹ್ಮಕಲಶೋತ್ಸವದ ನೆಪದಲ್ಲಿ ಸಮಾಜದ ಎಲ್ಲಾ ವರ್ಗಗಳನ್ನು ಪೋಷಿಸುವ ಪುಣ್ಯದ ಕೆಲಸವನ್ನೂ ಮಾಡುತ್ತಿವೆ ಎಂದರು.
ಎಂಜಿ.ಆರ್ ಗ್ರೂಪ್ಸ್ ಆಡಳಿತ ನಿರ್ದೇಶಕ ಹಾಗೂ ಕೊಡುಗೈ ದಾನಿ ಕೆ.ಪ್ರಕಾಶ್ ಶೆಟ್ಟಿ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದಿಂದ ಸಂಸ್ಕೃತಿ, ಸಂಸ್ಕಾರ ಹಾಗೂ ಆಚಾರವಿಚಾರಗಳು ಉಳಿಯುತ್ತವೆ ಎಂದರು.ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ನಾಣ್ನುಡಿಯಂತೆ ನಾವು ಸಮಾಜದಿಂದ ಗಳಿಸಿದ ದುಡಿಮೆಯ ಒಂದು ಪಾಲನ್ನು ಸಮಾಜಕ್ಕೆ ಮರಳಿಕೊಟ್ಟಾಗ ಬದುಕು ಸಾರ್ಥಕವಾಗುತ್ತದೆ. ನಾವು ಮಾಡುವ ಕೆಲಸ ಮಾತನಾಡಬೇಕೇ ಹೊರತು ಹೆಸರು ಮಾತನಾಡಬಾರದು,ನಮ್ಮ ಉಸಿರು ನಿಂತಾಗ ಹೆಸರು ತಾನಾಗಿಯೇ ಮಾತನಾಡುತ್ತದೆ ಎಂದು ಆಡಂಬರ ಪ್ರಚಾರವಿಲ್ಲದೇ ಮಾಡುವ ದಾನಧರ್ಮವೇ ಶ್ರೇಷ್ಟ ಎಂದರು.ಹುಟ್ಟುಸಾವಿನ ನಡುವೆ ಇರುವ ಬದುಕಿನಲ್ಲಿ ನಾವು ಏನಾದರೂ ಸಾಧನೆ ಮಾಡಬೇಕು.ಬಡವರ, ಅಶಕ್ತರ ಕಣ್ಣೀರು ಒರೆಸುವ ಕೆಲಸ ಮಾಡುವುದೇ ನಿಜವಾದ ದೇವರ ಸೇವೆ ಎಂದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಎಸ್.ಎಂ ಶೆಟ್ಟಿ ಎಜ್ಯುಕೇಶನ್ ಇನ್ಸ್ಟಿಟ್ಯೂಶನ್ಸ್ ಅಧ್ಯಕ್ಷ ರತ್ನಾಕರ ಶೆಟ್ಟಿ,ಮುಂಡ್ಕೂರು, ಉದ್ಯಮಿ ಉದಯ ಶೆಟ್ಟಿ, ಮುನಿಯಾಲು, ಉದ್ಯಮಿ ರಾಮಕೃಷ್ಣ ವಾಗ್ಳೆ, ಚಂದ್ರಶೇಖರ ನಾಯ್ಕ್,ಅಂಡಾರು ಮಹಾವೀರ ಹೆಗ್ಡೆ, ಆಡಳಿತ ಸಮಿತಿಯ ಅಧ್ಯಕ್ಷ ಕಾರ್ಯಕ್ರಮದ ರೂವಾರಿ ಅರುಣ್ ಭಟ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ರಾಜೇಂದ್ರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಾಧು.ಟಿ ಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಆಡಳಿತ ಮೊಕ್ತೇಸರ ಪರಮೇಶ್ವರಯ್ಯ, ಸಮಿತಿಯ ಗೌರವ ಸಲಹೆಗಾರರಾದ ವಿಶ್ವನಾಥ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ಶ್ಯಾಮ ನಾಯ್ಕ್,ಮಹಾಮ್ಮಾಯಿ ಭಜನಾ ಮಂಡಳಿ ಅಧ್ಯಕ್ಷ ರಾಜೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬ್ರಹ್ಮಲಶೋತ್ಸವ ಕಾರ್ಯಕ್ರಮದ ಯಶಸ್ಸಿನ ರೂವಾರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ವೇದಮೂರ್ತಿ ಅರುಣ್ ಭಟ್ ದಂಪತಿಯನ್ನು ಸಮಸ್ತ ಭಕ್ತರ ಪರವಾಗಿ ದೇವಳದ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇವೇಳೆ ದೇವಳದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಂಶುಪಾಲರಾದ ವೈ.ಪಿ ನಾಯಕ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ಸದಾನಂದ ನಾಯಕ್ ವಂದಿಸಿದರು. ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.