ಮಂಗಳೂರು: ಮಕ್ಕಳ ರಕ್ಷಣೆ ಮತ್ತು ಸುರಕ್ಷತೆ ನೀಡುವ ಸಲುವಾಗಿ ಪೋಕ್ಸೋ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಕಾಯ್ದೆಯಲ್ಲಿ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೆ ಗಂಡು ಮಕ್ಕಳಿಗೂ ಸಮಾನವಾದ ಕಾನೂನು ಜಾರಿಯಲ್ಲಿದೆ. ಯಾವುದೇ ಮಗು ಶೋಷಣೆಗೆ ಅಥವಾ ಅನ್ಯಾಯಕ್ಕೆ ಒಳಗಾಗಬಾರದು ಎಂದು ಈ ಕಾನೂನನ್ನು ರೂಪಿಸಲಾಗಿದೆ. ಕಾನೂನಿನ ಸಂಪೂರ್ಣ ಅರಿವು ಎಲ್ಲಾ ಮಕ್ಕಳಿಗೆ, ಪೋಷಕರಿಗೆ ,ಶಿಕ್ಷಕರಿಗೆ ಮತ್ತು ಸಮಾಜಕ್ಕೆ ಅಗತ್ಯ ಎಂದು ಇಂಚರ ಫೌಂಡೇಶನ್ ಮಂಗಳೂರು ಇದರ ಕಾರ್ಯಕ್ರಮ ಸಯೋಜಕಿ ಸೌಜನ್ಯ ಅಭಿಪ್ರಾಯಪಟ್ಟರು.
ಅವರು ಮಂಗಳೂರು ತಾಲೂಕು ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಪೋಕ್ಸೋ ಕಾಯಿದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯಿದೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಉಷಾಲತ, ಮಕ್ಕಳು ಹೆಚ್ಚು ಮನೆಯಲ್ಲಿ ಮತ್ತು ಮನೆಯ ಸುತ್ತಮುತ್ತಲು ಹಾಗೂ ಪರಿಸರದಲ್ಲಿಯೇ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳ ಸಹಾಯವಾಣಿಗೆ ತಿಳಿಸಿದರೆ ಖಂಡಿತ ನ್ಯಾಯ ಸಿಗಬಹುದು ಎಂದರು
ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಪ್ರಸ್ತಾವನೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು. ಹಿರಿಯ ಶಿಕ್ಷಕರಾದ ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಮೋಹಿನಿ ಧನ್ಯವಾದವಿತ್ತರು. ಶಿಕ್ಷಕರಾದ ಕುಮುದ, ಶಿವಣ್ಣ, ಕೃಷ್ಣಶಾಸ್ತ್ರೀ, ಸ್ಮಿತಾ ಸಹಕರಿಸಿದರು.
