ಮಂಡ್ಯ,ಆ. 21:ಧರ್ಮಸ್ಥಳದ ಸುತ್ತಮುತ್ತಲಿನ ಕಾಡಿನಲ್ಲಿ ನೂರಾರು ಶವ ಹೂತಿರುವುದಾಗಿ ತಲೆಬುರುಡೆ ಜೊತೆ ಪೊಲೀಸರಿಗೆ ದೂರು ನೀಡಿದ್ದ ಮುಸುಕುಧಾರಿ ಸಾಕ್ಷಿದಾರನ ಕೃತ್ಯದ ಕುರಿತು ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಅನಾಮಿಕ ಆಜಾನುಬಾಹು ದೇಹ, ಆತನ ಹಾವಭಾವ ಗುರುತಿಸಿದ ಆತ ಮಾಜಿ ಪತ್ನಿ ಎಂದು ಹೇಳಿಕೊಂಡು ಆತನ ಸುಳ್ಳಿನ ಕಂತೆ ಬಯಲು ಮಾಡಿದ್ದಾಳೆ.
ಮಂಡ್ಯದಲ್ಲಿ ಮಾತನಾಡಿರುವ ಅನಾಮಿಕನ ಮೊದಲ ಪತ್ನಿ,1999ರಲ್ಲಿ ಮದುವೆಯಾಗಿದ್ದು, 7 ವರ್ಷ ಸಂಸಾರ ಮಾಡಿದ್ದೆವು. ನಮಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದಾರೆ. ಅವನ ಬಳಿ ಒಳ್ಳೆಯತನ ಇರಲಿಲ್ಲ. ಬರೀ ಸುಳ್ಳು ಹೇಳುತ್ತಿದ್ದ.ಮದುವೆ ಬಳಿಕ ಧರ್ಮಸ್ಥಳದ ನೇತ್ರಾವತಿಯಲ್ಲಿ 7 ವರ್ಷ ಇದ್ದೆವು. ಧರ್ಮಸ್ಥಳದಲ್ಲಿ ಕಸಗುಡಿಸುವುದು, ಬಾತ್ರೂಂ ತೊಳೆಯುವುದು ಮಾಡುತ್ತಿದ್ದರು. ಆದರೆ, ಈಗ ಆತ ನೂರಾರು ಶವ ಹೂತಿದ್ದೇನೆ ಎಂದು ಹೇಳುತ್ತಿರುವುದು ಸುಳ್ಳು. ದುಡ್ಡಿನ ಆಮಿಷಕ್ಕೆ ಹೀಗೆ ಮಾಡುತ್ತಿರುಬಹುದು ಎಂದು ಸ್ಫೋಟಕ ವಿಚಾರಗಳನ್ಜು ಬಿಚ್ಚಿಟ್ಟಿದ್ದಾಳೆ.
ನನಗೆ ಹೊಡೆಯುವುದು, ಬಡಿಯುವುದು ಮಾಡುತ್ತಿದ್ದ. ವಿಚ್ಚೇದನ ವೇಳೆ ಜೀವನಾಂಶ ಕೊಡಲು ಸುಳ್ಳು ಹೇಳಿದ್ದ. ಜೀವನಾಂಶ ಕೊಡಲು ಕೆಲಸ ಮಾಡುತ್ತಿಲ್ಲ ಎಂದು ಕೋರ್ಟ್ಗೆ ಸುಳ್ಳು ಹೇಳಿದ್ದ. ಅಲ್ಲಿಯೂ ಕೂಡ ನನಗೆ ನ್ಯಾಯ ಸಿಗಲಿಲ್ಲ. ನನ್ನ ತಾಯಿಯೇ ನನ್ನ ಮಕ್ಕಳನ್ನು ಕಷ್ಟಪಟ್ಟು ಸಾಕಿದ್ದರು. ಧರ್ಮಸ್ಥಳ ಎಂದರೆ ನಮ್ಮ ಮನೆಯವರಿಗೆಲ್ಲಾ ಪ್ರೀತಿ. ಗುಂಡಿ ತೋಡಿದರೂ ಏನು ಸಿಕ್ಕಿಲ್ಲ ಎಂದಾದರೆ ಏನೋ ಕಿತಾಪತಿ ಮಾಡುತ್ತಿದ್ದಾನೆ ಅನ್ನಿಸುತ್ತಿದೆ. ಅತ್ಯಾಚಾರ, ಕೊಲೆಯಾದ ಶವಗಳನ್ನು ಹೂತ ಬಗ್ಗೆ ಯಾವತ್ತು ಹೇಳಿಲ್ಲ. ಯಾವಾಗಲೂ ಅಹಂಕಾರದಲ್ಲೇ ಮೆರೆಯುತ್ತಿದ್ದ. ಅಣ್ಣ ತಮ್ಮಂದಿರಿಗೂ ಬಾಯಿಗೆ ಬಂದಹಾಗೇ ಬೈಯ್ಯುತ್ತಿದ್ದ ಎಂದರು.
ಅವನು ಮೋಸಗಾರ, ಸುಳ್ಳುಗಾರ. ಅವನನ್ನು ಬಿಟ್ಟು ಬಂದದ್ದು ಒಳ್ಳೆಯದಾಯಿತು. ಇಟ್ಕೊಂಡಳವಳನ್ನ ಮದುವೆ ಮಾಡಿಕೊಳ್ಳಲು ನನಗೆ ಚಿತ್ರಹಿಂಸೆ ಕೊಟ್ಟು ಓಡಿಸಿದ. ಕೆಲಸಕೊಟ್ಟ, ಅನ್ನ ಕೊಟ್ಟ ಜಾಗಕ್ಕೆ ಅನ್ಯಾಯ ಮಾಡಬಾರದು. ಅವಳ ಒತ್ತಡಕ್ಕೆ, ಆಮಿಷಕ್ಕೆ ಒಳಗಾಗಿ ಹೀಗೆ ಮಾಡ್ತಿದ್ದಾನೆ. ದೇವಸ್ಥಾನದ ಹೆಸರು ಕೆಡಿಸುತ್ತಿರುವ ಅವನು ಹಾಳಾಗಬೇಕು. ಅವನು ಸತ್ತು, ಹೆಣ ಆದರೂ ನಾವು ಹೋಗಿ ನೋಡುವುದಿಲ್ಲ. ಮಾಸ್ಕ್ ಮ್ಯಾನ್ ಅಣ್ಣ ಹಾಗೂ ಮನೆಯವರೆಲ್ಲ ಒಳ್ಳೆಯವರು. ಆತನ ನನಗೆ ಹೊಡೆದಾಗ ನನ್ನ ಪರವಾಗಿ ಇದ್ದರು. ಈತ ಸರಿ ಇಲ್ಲ. ಅವನನ್ನ ಟಿವಿಯಲ್ಲಿ ನೋಡಿದ ಮೊದಲ ದಿನವೇ ಗೊತ್ತಾಯಿತು. ಅವನ ದೇಹದ ಆಕಾರ ನೋಡಿ ಗೊತ್ತಾಯಿತು ಎಂದು ತಿಳಿಸಿದಳು.