
ಬೆಂಗಳೂರು, ನ.29: ಇತ್ತೀಚಿನ ದಿನಗಳಲ್ಲಿ ಅನಗತ್ಯವಾಗಿ ಕಾಂಗ್ರೆಸ್ನಲ್ಲಿ ಕೆಲವು ಗೊಂದಲಗಳು ನಿರ್ಮಾಣವಾಗಿವೆ. ಈ ಕಾರಣಕ್ಕೆ ಪಕ್ಷದ ಹೈಕಮಾಂಡ್ ಸೂಚನೆಯಂತೆ ನಾನು ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ಗೊಂದಲಗಳಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.
ಇಂದು ಬೆಂಗಳೂರಿನ ‘ಕಾವೇರಿ’ ನಿವಾಸದಲ್ಲಿ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.ಇವತ್ತಿನ ವರೆಗೆ ನಮ್ಮ ಮಧ್ಯೆ ಯಾವುದೇ ಗೊಂದಲಗಳಿರಲಿಲ್ಲ. ಮುಂದೆಯೂ ಇದೇ ತರ ಮುಂದುವರಿಯಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ದೂರವಾಣಿ ಕರೆಯ ಮೇರೆಗೆ ಈ ಭೇಟಿ ನಡೆದಿದೆ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿದರು. ವೇಣುಗೋಪಾಲ್ ಅವರು ನಮಗಿಬ್ಬರಿಗೂ ಕರೆ ಮಾಡಿ ಮಾತನಾಡಲು ಸೂಚಿಸಿದ್ದರು. ಡಿಕೆಶಿಯವರು ತಮ್ಮ ಮನೆಗೆ ಆಹ್ವಾನಿಸಿದರಾದರೂ, ನಾನೇ ಅವರನ್ನು ಉಪಾಹಾರಕ್ಕೆ ಕರೆದೆ. ಸಚಿವ ಪೊನ್ನಣ್ಣ ಅವರ ಜೊತೆಗೂಡಿ ನಾವಿಬ್ಬರೂ ಉಪಾಹಾರ ಸೇವಿಸಿ ಚರ್ಚೆ ನಡೆಸಿದ್ದೇವೆ ಎಂದು ಸಿಎಂ ಭೇಟಿಯ ಹಿನ್ನೆಲೆಯನ್ನು ವಿವರಿಸಿದರು.
.
