ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಬಳಿಯ ಹೆದ್ದಾರಿಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಏಳು ಮಂದಿ ಸಾವನ್ನಪಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ದೃಢಪಡಿಸಿರುವ ಕಾಗೇರಿ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಈ ಘಟನೆ ನಡೆದಿದ್ದು, ಗುಡ್ಡ ಕುಸಿದು 7 ಮಂದಿ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಮಣ್ಣಿನಡಿ ಸಿಲುಕಿರುವವರನ್ನು ರಕ್ಷಿಸಲು ಸೂಚನೆ ನೀಡಲಾಗಿದ್ದು, ಮಣ್ಣಿನಡಿ ಒಂದೇ ಕುಟುಂಬದ ಐವರು ಸೇರಿದಂತೆ 15ಕ್ಕೂ ಅಧಿಕ ಮಂದಿ ಸಿಲುಕಿಕೊಂಡಿರುವ ಶಂಕೆ ಇದೆ.
ಇದೀಗ ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಶಾಂತಿ ನಾಯ್ಕ (37ವ) ಎಂದು ತಿಳಿದು ಬಂದಿದೆ. ಮಹಿಳೆಯ ಶವವನ್ನು ಎನ್ ಡಿಆರ್ ಎಫ್ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಹೆದ್ದಾರಿಯಲ್ಲಿ ನಿಂತಿರು ಅನೇಕ ವಾಹನಗಳಿಗೂ ಹಾನಿ ಉಂಟಾಗಿದೆ ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್ ಡಿಆರ್ ಎಫ್‌ಸಿಬ್ಬಂದಿಗಳು ಆಗಮಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.














