ಬೆಂಗಳೂರು :ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಕುರಿತು ಮಂಗಳೂರು ಪೊಲೀಸರ ಜತೆ ಕಾನೂನು- ಸುವ್ಯವಸ್ಥೆ ಸಭೆ ನಡೆಸಲು ಬಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮುಸ್ಲಿಂ ಮುಖಂಡರ ಜತೆಗೆ ಪ್ರತ್ಯೇಕ ಸಭೆ ನಡೆಸುವ ಮೂಲಕ ಈ ಹತ್ಯಾ ಪ್ರಕರಣದ ಹಾದಿ ತಪ್ಪಿಸಲು ಮುಂದಾಗಿದ್ದಾರೆ. ಅವಳಿ ಜಿಲ್ಲೆಯಲ್ಲಿ ಸರ್ಕಾರ ಪ್ರಾರಂಭಿಸಲು ಮುಂದಾಗಿರುವ ಆ್ಯಂಟಿ ಕಮ್ಯುನಲ್ ಫೋರ್ಸ್ ಹಿಂದೂಗಳ ದಮನಕ್ಕೆ ದುರ್ಬಳಕೆಯಾಗಲಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಸಚಿವ ಪರಮೇಶ್ವರ್ ಅವರು, ಪೊಲೀಸ್ ಅಧಿಕಾರಿಗಳ ಜತೆಗೆ ಸಭೆ ನಡೆಸುವುದಕ್ಕೆ ಮುನ್ನ ಮುಸ್ಲಿಂ ಮುಖಂಡರ ಜತೆ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಮುಸ್ಲಿಂ ಮುಖಂಡರು ಆಕ್ರೋಶಗೊಂಡು ಗೃಹ ಸಚಿವರ ಎದುರಲ್ಲೇ ಮೇಜು ಗುದ್ದಿ ಸರ್ಕಾರಕ್ಕೆ ಧಮ್ಕಿ ಹಾಕಿದ್ದಾರೆ.ಅಂದರೆ ಪ್ರಜೆಗಳಿಂದ ಚುನಾಯಿತ ಸರ್ಕಾರದ ಮೇಲೆ ಸವಾರಿ ಮಾಡುವ ಹಂತಕ್ಕೆ ಇವರು ತಲುಪಿದ್ದಾರೆ ಎಂದರೆ ಇದು ಆಡಳಿತ ವ್ಯವಸ್ಥೆಗೆ ಮಾರಕ. ಗೃಹ ಸಚಿವರು ಹಂತಕರ ರಾಗಕ್ಕೆ ತಾಳ ಹಾಕಲು ಹೊರಟಿದ್ದಾರೆ. ಗೃಹ ಇಲಾಖೆಯನ್ನು ಕರಾವಳಿಯ ಜೆಹಾದಿಗಳ ಕಾಲ ಬುಡದಲ್ಲಿ ಅಡವಿಡುತ್ತೀರಾ ? ಎಂದು ಸುನಿಲ್ ಖಾರವಾಗಿ ಪ್ರಶ್ನಿಸಿದ್ದಾರೆ.
ಇದಲ್ಲದೇ ಉಭಯ ಜಿಲ್ಲೆಗಳನ್ನು ಒಳಗೊಂಡು ಆ್ಯಂಟಿ ಕಮ್ಯುನಲ್ ಪೋರ್ಸ್ ರಚನೆ ಮಾಡುವುದರ ಉದ್ದೇಶ ಸ್ಪಷ್ಟವಾಗಿದೆ. ಹಿಂದುತ್ವದ ಪರವಾಗಿರುವ ಧ್ವನಿಯನ್ನು ಪೊಲೀಸ್ ಬಲ ಬಳಸಿ ದಮನಿಸುವುದು ಸರ್ಕಾರದ ಸ್ಪಷ್ಟ ಉದ್ದೇಶವಾಗಿದೆ. ಸರ್ಕಾರಕ್ಕೆ ಶಾಂತಿಯ ಬದಲು PFI ಉಗ್ರರ ಹಿತಾಸಕ್ತಿ ರಕ್ಷಣೆ ಮಾಡುವುದೇ ಆದ್ಯತೆಯಾಗಿದೆ ಎಂದು ಟೀಕಿಸಿದ್ದಾರೆ.
ಸುಹಾಸ್ ಹತ್ಯೆ ವಿಚಾರದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರು ಫಾಝಿಲ್ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದ್ದರು. ಆದರೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಫಾಝಿಲ್ ಸಹೋದರ ಆದಿಲ್ ಈ ಕೊಲೆಗೆ 5 ಲಕ್ಷ ರೂ.ಸುಪಾರಿ ನೀಡಿದ್ದಾನೆ ಎಂದು ಹೇಳಿದ್ದಾರೆ. ಹಾಗಾದರೆ ಯಾವುದು ಸತ್ಯ ? ಫಾಝಿಲ್ ಸೋದರ ಸುಪಾರಿ ಕೊಟ್ಟಿದ್ದು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದ್ದು, ಈ ಹತ್ಯೆ ಪ್ರಕರಣದ ದಿಕ್ಕುತಪ್ಪಿಸಲು ಯತ್ನಿಸಿದ ಸ್ಪೀಕರ್ ಖಾದರ್ ತಮ್ಮ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.