Share this news

ಕಾರ್ಕಳ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಾಂವಿಧಾನಿಕ ತಿದ್ದುಪಡಿಯೊಂದಿಗೆ ರದ್ದುಪಡಿಸಲಿದೆ. ಈ ನಿಟ್ಟಿನಲ್ಲಿ ಫಲಾನುಭವಿಗಳು ತಮ್ಮ ಬದುಕಿನ ಅಸ್ಥಿತ್ವಕ್ಕಾಗಿ ಜಾಗೃತರಾಗಿ ಬಿಜೆಪಿಯ ವಿರುದ್ಧ ತಮ್ಮ ಹಕ್ಕು ಚಲಾಯಿಸಿ ಆ ಪಕ್ಷ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕಿದೆ ಎಂದು ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಶೆಟ್ಟಿ ಹೇಳಿದ್ದಾರೆ.

ಅವರು ಇಲ್ಲಿನ ಪ್ರಕಾಶ್ ಹೋಟೇಲ್ ಸಭಾಂಗಣದಲ್ಲಿ‌ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಪುರಸಭಾ ವ್ಯಾಪ್ತಿಯ ಕಾಯಕರ್ತರ ಸಭೆಯಲ್ಲಿ ಮಾತಾಡುತ್ತಿದ್ದರು.
ಕೇಂದ್ರ ಸರಕಾರ ಜಾರಿಗೆ ತಂದ ಕರಾಳ ಕೃಷಿ ಕಾಯ್ದೆಗಳನ್ನು ತನ್ನ ಬಜೆಟ್ ಮಂಡನೆಯ ಸಂದರ್ಭದಲ್ಲಿ ಹಿಂದೆಗೆದುಕೊಂಡು ರಾಜ್ಯದ ರೈತಾಪಿ ವರ್ಗಕ್ಕೆ ‌ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ನಮ್ಮ ಸರಕಾರ ಕೇಂದ್ರದ ಬಿಜೆಪಿ ಸರಕಾರದ ರೈತ ವಿರೋಧಿ ಧೋರಣೆಗೆ ಸರಿಯಾದ ಉತ್ತರ ನೀಡಿದೆ. ಕೃಷಿ ಪ್ರಧಾನವಾದ ಈ ದೇಶದ ಕೃಷಿಯೊಂದಿಗಿನ ಸರ್ವಾಂಗೀಣ ಅಭಿವೃದ್ದಿ ಕಾಂಗ್ರೆಸ್ಸಿನಿಂದಲ್ಲದೆ ಅನ್ಯ ಪಕ್ಷಗಳಿಂದ ಸಾಧ್ಯವಿಲ್ಲ ಎಂದರು.
‌‌ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಮಾತಾಡಿ ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿ ಎಂದು ಅಧಿಕಾರಕ್ಕೆ ಬಂದು ಇದೀಗ 2.50 ಕೋಟಿ ಮಂದಿ ಉದ್ಯೋಗಕ್ಕಾಗಿ ಪರದೇಶಗಳನ್ನು ಅವಲಂಬಿಸುವಂತೆ ಮಾಡಿದ ಪ್ರಧಾನಿ ಮೋದೀಜಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಸುಳ್ಳಿನ ತಳಹದಿಯ ಮೇಲೆ ನಿಂತಿದೆ. ಸಂವಿಧಾನ ಬದಲಿಸುವುದು ಇವರ ಅಂತಿಮ ಗುರಿಯಾಗಿದೆ. ಇದು ಸರ್ವಾಧಿಕಾರದ ಲಕ್ಷಣವಾಗಿದ್ದು ಇದನ್ನು ಅವರದ್ದೇ ಪಕ್ಷದ ನಾಯಕರು ಬಯಲು ಮಾಡಿದ್ದಾರೆ. ಇದನ್ನು ಯಾವತ್ತೂ ಕಾಂಗ್ರೆಸ್ ಸಹಿಸದು. ಸಂವಿಧಾನದ ರಕ್ಷಣೆ ಕಾಂಗ್ರೆಸ್ಸಿನ ಅಂತಿಮ ಗುರಿಯಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಪುರಸಭಾಧ್ಯಕ್ಷ ಸುಬೀತ್ ಕುಮಾರ್, ಪ್ರತಿಮಾ ರಾಣೆ, ಸುರೇಂದ್ರ ರಾಣೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಲಾಕ್ ವಕ್ತಾರ ಶುಭದ ರಾವ್ ಪ್ರಸ್ತಾವನೆಗೈದು ಸ್ವಾಗತಿಸಿ ವಂದನಾರ್ಪಣೆಗೈದರು.

 

Leave a Reply

Your email address will not be published. Required fields are marked *