
ಉಡುಪಿ, ಡಿ.01: ಶ್ರೀಕೃಷ್ಣ ಮಠದ ಕನಕ ಕಿಂಡಿಗೆ ನೂತನವಾಗಿ ಅಳವಡಿಸಲಾಗಿದ್ದ ಸ್ವರ್ಣ ಕವಚವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಆಹ್ವಾನಿಸಿಲ್ಲ ಎನ್ನುವ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು ಸ್ವತಃ ಪ್ರಮೋದ್ ಮಧ್ವರಾಜ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕನಕದಾಸರ ಪರಮಭಕ್ತಿಗೆ ಒಲಿದ ಶ್ರೀಕೃಷ್ಣನ ಕನಕನ ಕಿಂಡಿಗೆ ಸ್ವರ್ಣ ಕವಚ ಅಳವಡಿಸುವ ಸೌಭಾಗ್ಯ ಸಿಕ್ಕಿದೆ. ಈ ಕಾರ್ಯಕ್ರಮಕ್ಕೆ ನನಗೆ ಯಾಕೆ ಆಹ್ವಾನ ನೀಡಿಲ್ಲ ಎನ್ನುವುದು ಗೊತ್ತಿಲ್ಲ, ನನಗೆ ಆ ಪ್ರದೇಶಕ್ಕೆ ಯಾರಿಂದ ನನಗೆ ಪ್ರವೇಶ ನಿಷೇಧಿಸಲ್ಪಟ್ಟಿತ್ತು ಎನ್ನುವುದು ನನಗೆ ಕ್ಷÄಲ್ಲಕ ವಿಚಾರ, ಈ ವಿಚಾರದಲ್ಲಿ ನನಗೆ ಯಾವುದೇ ದುಃಖ, ಬೇಸರ, ಅಪಮಾನವಾಗಿಲ್ಲ ಬೇಸರವಿಲ್ಲ ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸದೇ ಕನಕದಾಸರಂತೆ ದೂರ ಇರಿಸಲಾಯಿತೇ ಎಂದಾಗ, ಕನಕದಾಸರು ಸೂರ್ಯನಿದ್ದಂತೆ ನಾನು ಕೇವಲ ಮಿಂಚುಹುಳ ಅವರ ಜೊತೆಗೆ ನನ್ನ ಹೋಲಿಕೆ ಸಲ್ಲದು ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.
ನಮ್ಮ ತಂದೆಯವರ ಕನಸಿನಂತೆ ಹಾಗೂ ಸುಗುಣೇಂದ್ರ ಸ್ವಾಮೀಜಿಗಳ ಮನವಿಯಂತೆ ಸ್ವರ್ಣ ಕವಚ ಅರ್ಪಿಸಲಾಗಿದೆ. ನನ್ನ ತಂದೆಯವರು ಕೊಟ್ಟ ಸೇವೆಯನ್ನು ದೇಶದ ಪ್ರಧಾನಿಯವರು ಉದ್ಘಾಟಿಸಿರುವುದು ಅತ್ಯಂತ ಸಂತೋಷದಾಯಕ ವಿಚಾರ. ಸೇವೆಯನ್ನು ಮಾಡುವ ಅವಕಾಶ ನಮಗೆ ಕೊಟ್ಟರು, ಅದನ್ನು ಪ್ರಧಾನಿಯವರಿಗೆ ಉದ್ಘಾಟನೆ ಮಾಡುವ ಅವಕಾಶ ಸಿಕ್ಕ ಹಿನ್ನಲೆಯಲ್ಲಿ ಸ್ವಾಮೀಜಿಗಳಿಗೆ ಕೃತಜ್ಞತೆಗಳು. ಕನಕ ಗೋಪುರ ಹಾಗೂ ಕನಕನ ಕಿಂಡಿ ನಮ್ಮ ಕುಟುಂಬಕ್ಕೆ ಸಂಬAಧಪಟ್ಟಿದ್ದು, ಆದ್ದರಿಂದ ಆ ಪ್ರದೇಶಕ್ಕೆ ನನಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇತ್ತು ಆದರೆ ಪಾಸ್ ಪಡೆಯುವ ಅವಕಾಶ ಸಿಗಲಿಲ್ಲ, ರೋಡ್ ಶೋದಲ್ಲಿ ಪ್ರಧಾನಿಯವರನ್ನು ನೋಡೋಣ ಎಂದರೆ ಇದು ವಿವಾದಕ್ಕೆ ಕಾರಣವಾಗಬಹುದೆಂದು ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸಿದೆ ಎಂದರು.
ಪ್ರಮೋದ್ ಮಧ್ವರಾಜ್ ಅವರು ಬಿಜೆಪಿಯ ಮುಖಂಡ ಆಗಿದ್ದರೂ ಕೂಡ ಜಿಲ್ಲಾ ಬಿಜೆಪಿ ನಾಯಕರು ಅವರನ್ನು ಯಾಕೆ ದೂರವಿಟ್ಟರು ಎನ್ನುವ ಚರ್ಚೆ ನಡೆಯುತ್ತಿದೆ. ಆದರೆ ಸುಗುಣೇಂದ್ರ ಸ್ವಾಮಿಗಳ ಸೂಚನೆಯ ಮೇರೆಗೆ ಜಿಲ್ಲಾಡಳಿತಕ್ಕೆ ಪಾಸ್ ನೀಡುವ ವ್ಯವಸ್ಥೆ ಮಾಡಬಹುದಿತ್ತು ಎನ್ನುವ ಚರ್ಚೆ ನಡೆಯುತ್ತಿದೆ.

.
.
