
ಬೆಂಗಳೂರು, ಡಿ.30: ಕೋಗಿಲು ಲೇಔಟ್ ನಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವ ವಲಸಿಗರಿಗೆ ಪುನರ್ವಸತಿ ಕಲ್ಪಿಸುವುದಾದರೆ, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೂ ಇದೇ ನ್ಯಾಯ ಅನುಸರಿಸಬೇಕಲ್ಲವೇ? ಎಂದು ಶಾಸಕ ಮಾಜಿ ಸಚಿವ ಸುನಿಲ್ ಕುಮಾರ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಅವರು ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಅವರು, ಕೋಗಿಲು ಲೇಔಟ್ ನಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿಕೊಂಡ ವಲಸಿಗರಿಗೆ ರಾಜ್ಯ ಸರ್ಕಾರ ತೆರಿಗೆದಾರರ ಹಣದಲ್ಲಿ ಪುನರ್ವಸತಿ ಕಲ್ಪಿಸುವುದೇ ಅಕ್ರಮ.ಒಂದುವೇಳೆ ಈ ನಿರ್ಧಾರ ಕೈಗೊಂಡಿದ್ದೇ ಆದರೆ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೂ ಇದೇ ನ್ಯಾಯ ಅನಸರಿಸಬೇಕಲ್ಲವೇ? ಆದರೆ ರಾಜ್ಯ ಸರ್ಕಾರ ಈಗಾಗಲೇ 94(c) ಅಡಿ ಅರ್ಜಿ ಸಲ್ಲಿಸಿದ ಲಕ್ಷಾಂತರ ಅರ್ಜಿಗಳನ್ನು ವಜಾಗೊಳಿಸಿದೆ. ಗ್ರಾಮಾಂತರ ಪ್ರದೇಶದಲ್ಲಿನ ಈ ಸಮಸ್ಯೆಯನ್ನು ಶಾಶ್ವತವಾಗಿಟ್ಟಿರುವ ಕಾಂಗ್ರೆಸ್ ಸರ್ಕಾರ ಅಕ್ರಮ ವಲಸಿಗರು ಮುಸ್ಲಿಮರು ಎಂಬ ಕಾರಣಕ್ಕೆ ಉದಾರತೆ ತೋರುತ್ತಿದೆ. ಸರ್ಕಾರಕ್ಕೆ ನಿಜಕ್ಕೂ ಈ ವಲಸಿಗರ ಸಮಸ್ಯೆ ಬಗೆಹರಿಸಬೇಕೆಂಬ ಮನಸಿದ್ದರೆ, ಮಾನವೀಯತೆ ಮೆರೆಯಬೇಕು ಎಂದಿದ್ದರೆ ವಕ್ಫ್ ಭೂಮಿಯಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸಲಿ. ವಕ್ಫ್ ಭೂಮಿ ಇರುವುದೇ ಬಡವರಿಗಾಗಿ ಅಲ್ಲವೇ ?ಅದನ್ನು ಬಿಟ್ಟು ರಾಜೀವ್ ಗಾಂಧಿ ವಸತಿ ಯೋಜನೆ ಸೇರಿದಂತೆ ಇನ್ನಿತರೆ ತೆರಿಗೆದಾರರ ಹಣದಲ್ಲಿ ನಡೆಸುವ ಕಲ್ಯಾಣ ಯೋಜನೆಗಳಲ್ಲಿ ಅವಕಾಶ ನೀಡಿದರೆ 94 (c) ಅರ್ಜಿದಾರರಿಗೂ ಇದೇ ಸೂತ್ರದಂತೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರದ ಆಲಿಸುವ ಕಿವಿಗಳು ಮುಸ್ಲಿರತ್ತ ಮಾತ್ರ ತುಡಿದರೆ ಸಾಕೇ ? ಸರ್ವರಿಗೂ ಸಮಪಾಲು ಸೂತ್ರದಲ್ಲಿ ಮುಸ್ಲಿಂರಿಗೆ ತುಸು ಹೆಚ್ಚು ಎಂದರೆ ಹೇಗೆ ಸ್ವಾಮಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಇಬ್ಬಗೆಯ ನೀತಿಯ ವಿರುದ್ಧ ಸಾಮಾಜಿಕ ಜಾಲತಾಣ ‘ಎಕ್ಸ್ ‘ನಲ್ಲಿ ಕಿಡಿಕಾರಿದ್ದಾರೆ.


.
.
