ಬೆಳ್ತಂಗಡಿ: ತಾಲೂಕಿನ ಮಲವಂತಿಗೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗೋ ಸಾಗಾಟವನ್ನು ಸ್ಥಳೀಯರ ಸಹಕಾರದೊಂದಿಗೆ ಪತ್ತೆ ಹಚ್ಚಿರುವ ಬೆಳ್ತಂಗಡಿ ಪೊಲೀಸರು ನಾಲ್ವರು ಆರೋಪಿಗಳನ್ನು ಗುರುವಾರ ರಾತ್ರಿ ಬಂಧಿಸಿದ್ದಾರೆ. ಚಿಬಿದ್ರೆ ಗ್ರಾಮದ ಪೆರಿಯಡ್ಕ ನಿವಾಸಿ ಯತೀಂದ್ರ(24), ತೋಟತ್ತಾಡಿ ಗ್ರಾಮದ ಬೆಂದ್ರಾಳ ನಿವಾಸಿ ಅರವಿಂದ(30), ಚಾರ್ಮಾಡಿ ಗ್ರಾಮದ ನಿವಾಸಿ ಉಸ್ಮಾನ್ ( 36) ಹಾಗೂ ಚಿಬಿದ್ರೆ ಗ್ರಾಮದ ನಿವಾಸಿ ಆರಿಫ್ (27) ಬಂಧಿತ ಆರೋಪಿಗಳು.
ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಆಧಾರದಲ್ಲಿ ಬೆಳ್ತಂಗಡಿ ಪೊಲೀಸರು ಈ ಕಾರ್ಯಾಚರಣೆ ನಡೆಸಿ ಮಲವಂತಿಗೆ ಗ್ರಾಮದ ಎಳನೀರು ದಿಡುಪೆ ರಸ್ತೆಯಲ್ಲಿ ದನ ಸಾಗಾಟ ಮಾಡುತ್ತಿದ್ದ ಆರೋಪಿಗಳ ಸಹಿತ ಎರಡು ಪಿಕಪ್ ವಾಹನಗಳನ್ನು ವಶಪಡಿಸಿಕೊಂಡು 5 ಜಾನುವಾರುಗಳನ್ನು ರಕ್ಷಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.