Share this news

 

 

ಕಾರ್ಕಳ,ಜ.24: ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕಾರ್ಕಳ ತಾಲೂಕಿನ ಜನರ ಬದುಕೇ ಅತಂತ್ರವಾಗಿದೆ.ಕಾರ್ಕಳ ತಾಲೂಕಿನೆಲ್ಲೆಡೆ ಪ್ರಭಾವಿ ವ್ಯಕ್ತಿಗಳ ಅಕ್ರಮ ಕಲ್ಲು ಗಣಿಗಾರಿಕೆ ದಂಧೆ ಮಿತಿಮೀರಿದ್ದು, ಕಂಡಕಂಡ ಸರ್ಕಾರಿ ಜಾಗದಲ್ಲಿ ಕಲ್ಲು ತೆಗೆಯುವ ಕೆಲಸ ರಾಜಾರೋಷವಾಗಿ ನಡೆಯುತ್ತಿದೆ. ದುರಂತ ಎಂದರೆ ಅಕ್ರಮ ಗಣಿಗಾರಿಕೆಗೆ ಅಧಿಕಾರಗಳ ಪರೋಕ್ಷ ಕುಮ್ಮಕ್ಕು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಪೊಸನೊಟ್ಟು ಎಂಬಲ್ಲಿನ ರವಿಚಂದ್ರ ಎಂಬಾತ ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಯಾವುದೇ ಪರವಾನಗಿ ಪಡೆಯದೇ ಏಕಾಎಕಿ ತನ್ನ ಜಾಗದಲ್ಲಿನ ಬಂಡೆಯನ್ನು ಸ್ಫೋಟಕಗಳನ್ನು ಬಳಸಿ ತೆಗೆಯುತ್ತಿದ್ದರೂ ಅಧಿಕಾರಿಗಳು ಈ ಬಗ್ಗೆ ತಮಗೆ ಏನೂ ಗೊತ್ತೇ ಇಲ್ಲ ಎನ್ನುವ ಹೇಳಿಕೆ ನೀಡಿದ್ದು, ಗಣಿ ಲೂಟಿಗೆ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ ಎನ್ನುವ ಅನುಮಾನ ದಟ್ಟವಾಗಿದೆ.

ಅಕ್ರಮ ಗಣಿಗಾರಿಕೆಗೆ ಲೀಸ್ ಎನ್ನುವ ಗುರಾಣಿ:

ಕಾರ್ಕಳ ತಾಲೂಕಿನಾದ್ಯಂತ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧದ ಹೋರಾಟ ಇಂದು ನಿನ್ನೆಯದಲ್ಲ.ಕಳೆದ ಎರಡು ದಶಕಗಳಿಂದ ಅಕ್ರಮ ಗಣಿಗಾರಿಕೆ ವಿರುದ್ಧ ಸಾಕಷ್ಟು ಹೋರಾಟ ನಡೆದಿವೆ. ಕಾರ್ಕಳ ತಾಲೂಕಿನ ಕುಕ್ಕುಂದೂರು, ನಿಟ್ಟೆ,ಬೆಳ್ಮಣ್,ಇನ್ನಾ, ನಂದಳಿಕೆ, ಸೂಡ, ಕಲ್ಯಾ,ಪಳ್ಳಿ ಮುಂತಾದ ಗ್ರಾಮಗಳಲ್ಲಿ ಸುಮಾರು 100 ಕ್ಕೂ ಮಿಕ್ಕಿ ಕಲ್ಲು ಕೋರೆಗಳು ಹಾಗೂ ಕ್ರಶರ್ ಯುನಿಟ್ ಗಳು ಕಾರ್ಯಾಚರಿಸುತ್ತಿವೆ. ಈ ಪೈಕಿ ಬಹುತೇಕ ಘಟಕಗಳು 20 ರಿಂದ30 ವರ್ಷಗಳ ದೀರ್ಘಾವಧಿ ಲೀಸ್ ಪಡೆದು ತಮಗೆ ಹಂಚಿಕೆಯಾದ ಜಾಗ ಬಿಟ್ಟು ಹತ್ತಾರು ಎಕರೆ ಸರ್ಕಾರಿ ಜಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿವೆ ಎನ್ನುವ ವಿಚಾರ ಗೂಗಲ್ ಮ್ಯಾಪ್ ನಲ್ಲಿ ಬಹಿರಂಗವಾಗಿದೆ.ಸುಪ್ರೀಂ ಕೋರ್ಟ್ ಹಸಿರು ನ್ಯಾಯಾಧಿಕರಣ ಪೀಠದಲ್ಲಿ (ಸರ್ಕಾರಿ ಜಮೀನು) ಡೀಮ್ಡ್ ಅರಣ್ಯ ಕುರಿತು ಯಾವುದೇ ಅಂತಿಮ ಆದೇಶ ಬಂದಿಲ್ಲ,ಆದರೂ ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ. ಲೀಸ್ ಇದೆ ಎನ್ನುವ ಒಂದೇ ಕಾರಣ ಮುಂದಿಟ್ಟುಕೊಂಡು ನಿಯಮಾವಳಿಗಳನ್ನು ಗಾಳಿಗೆ ತೂರಿ ಗಣಿಗಾರಿಕೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕುಕ್ಕುಂದೂರು ಗ್ರಾಮದಲ್ಲಿ ಗಣಿಗಾರಿಕೆ ವಿರುದ್ಧ ಸಿಡಿದೆದ್ದ ಮಹಿಳೆಗೆ ಜೀವಬೆದರಿಕೆ: ಗ್ರಾಮಸ್ಥರ ಆಕ್ರೋಶ

ಕುಕ್ಕುಂದೂರು ಗ್ರಾಮದ ಪೊಸನೊಟ್ಟು ಎಂಬಲ್ಲಿ ಅಕ್ರಮ ಗಣಿಗಾರಿಕೆ ಮಿತಿಮೀರಿದೆ.ನಿತ್ಯ ಗಣಿಧೂಳು ಕಿರಿಕಿರಿ, ಸ್ಪೋಟಕ ಬಳಕೆ,ಯಂತ್ರಗಳ ಸದ್ದಿನಿಂದ ಜನರ ಜೀವನ ದುಸ್ತರವಾಗಿದೆ.
ಪೊಸನೊಟ್ಟು,ಹಾಂಕ್ರಾಡಿ ಪರಿಸರದಲ್ಲಿ ಸುಮಾರು 30 ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಈ ಭಾಗದಲ್ಲಿನ ಕಲ್ಲು ಗಣಿಗಾರಿಕೆ ಘಟಕಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಈ ಭಾಗದಲ್ಲಿ ಮತ್ತೆ ಹೊಸದಾಗಿ ಕಲ್ಲಿನ‌ ಬ್ಲಾಕ್ ಕತ್ತರಿಸುವ ಘಟಕ,ಅಕ್ರಮವಾಗಿ ಕಲ್ಲಿನ ಬ್ಲಾಕ್ ತೆಗೆಯುವ ವಿಚಾರ ತಿಳಿದ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಗಣಿಗಾರಿಕೆ ವಿರುದ್ಧ ರೈತ ಮಹಿಳೆಯೊಬ್ಬರು ವಿರೋಧಿಸಿದಾಗ ಅವರಿಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.ಅಕ್ರಮ ಗಣಿಗಾರಿಕೆ ನಡೆಯುವ ವಿಚಾರ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜನರ ಆಕ್ರೋಶದ ಹಿನ್ನಲೆಯಲ್ಲಿ ಗಣಿ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಕಾಟಾಚಾರಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೂ ಮುಂದಾಗಿದ್ದಾರೆ.

ಭರ್ಜರಿ ಆದಾಯ ತರುವ ಕಲ್ಲು ಬ್ಲಾಕ್ ಕಟ್ಟಿಂಗ್ ದಂಧೆ:

ಕಲ್ಲಿನ ಬ್ಲಾಕ್ ಗಳಿಗೆ ಹೊರ ರಾಜ್ಯಗಳಲ್ಲಿ ಭಾರೀ ಬೇಡಿಕೆ ಇರುವ ಹಿನ್ನಲೆಯಲ್ಲಿ ಕಾರ್ಕಳದಲ್ಲಿ ಕಲ್ಲಿನ ಬ್ಲಾಕ್ ತೆಗೆಯುವ ದಂಧೆ ಜೋರಾಗಿ ನಡೆಯುತ್ತಿದೆ ಎನ್ನಲಾಗಿದೆ.ಪ್ರಮುಖವಾಗಿ ತಮಿಳುನಾಡಿನಿಂದ ವಲಸೆ ಬಂದವರು ಖಾಸಗಿ ವ್ಯಕ್ತಿಗಳ ಜಾಗದಲ್ಲಿ ಕೃಷಿ ಉದ್ದೇಶದ ನೆಪದಲ್ಲಿ 3A ಅಡಿಯಲ್ಲಿ NOC ಪಡೆದು ಗಣಿಗಾರಿಕೆ ನಡೆಸುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

(ಅಕ್ರಮ ಗಣಿಗಾರಿಕೆ ಕುರಿತ ಇನ್ನಷ್ಟು ಮಾಹಿತಿ ಮುಂದಿನ ಸಂಚಿಕೆಯಲ್ಲಿ…)

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *