ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್’ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುತ್ತಲೇ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾನೂನು ಬಿಗಿಗೊಳಿಸಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.
ಈ ಕುರಿತು ಕಾನೂನು ತಜ್ಞರ ಜತೆ ಸುಧೀರ್ಘ ಸಮಾಲೋಚನೆ ನಡೆಸಿ,ಮುಂಬರುವ ಜು.1 ರಿಂದ ದೇಶದಾದ್ಯಂತ ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬರಲಿವೆ ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ‘ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಆಡಳಿತದಲ್ಲಿ ಭಾರತದ ಪ್ರಗತಿಪರ ಹಾದಿ’ ಕುರಿತ ಸಮ್ಮೇಳನದಲ್ಲಿ ಸಚಿವರು ಈ ಕುರಿತು ಪ್ರಸ್ತಾಪಿಸಿದ್ದು, ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷರತಾ ಅಧಿನಿಯಮ್ ಎಂಬ ಮೂರು ಹೊಸ ಕಾನೂನುಗಳು ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲಾಯಿಸುತ್ತವೆ. ಐಪಿಸಿ, ಸಿಅರ್’ಪಿಸಿ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆಯನ್ನು ಅನುಸರಿಸಿದ ನಂತರ ಮತ್ತು ಭಾರತದ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಮೂರು ಕಾನೂನುಗಳನ್ನು ಬದಲಾಯಿಸಲಾಗುವುದೆಂದು ಮೇಘವಾಲ್ ಹೇಳಿದರು.
ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷರತಾ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳಿಗೆ ತರಬೇತಿ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.