Share this news

ಕಾರ್ಕಳ, ಸೆ,12: ಗ್ರಾಮ ಪಂಚಾಯತಿ ಮಟ್ಟದಲ್ಲಿ ಜನ ಸಾಮಾನ್ಯರಿಗೆ ಉತ್ತಮ ಸೇವೆಗಳು ಲಭಿಸಿದಾಗ, ಸರ್ಕಾರದ ಮಟ್ಟದಲ್ಲೂ ತ್ವರಿತಗತಿಯಲ್ಲಿ ಕೆಲಸಗಳಾಗುತ್ತವೆ. ಇದರಿಂದ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ ಕನಸು ನನಸಾಗಲು ಸಾಧ್ಯ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಅವರು ಶುಕ್ರವಾರ ಕಾರ್ಕಳ ತಾಲೂಕಿನ ನೀರೆ ಗ್ರಾಮ ಪಂಚಾಯಿತಿಯ ನೂತನ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳಗಾವಿ ನನ್ನ ಜನ್ಮಭೂಮಿ ಉಡುಪಿ ಕರ್ಮಭೂಮಿಯಾಗಿದೆ. ಉಡುಪಿ ಜಿಲ್ಲೆ ಸಾಂಸ್ಕೃತಿಕ ರಾಯಭಾರಿಯಾಗಿದ್ದು ಈ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವುದು ಅತ್ಯಂತ ಹೆಮ್ಮೆ ಎನಿಸಿದೆ ಎಂದರು. ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಹಾಗೂ 9/11 ಸಮಸ್ಯೆ ಕುರಿತು ಶಾಸಕ ಸುನಿಲ್ ಕುಮಾರ್ ವಿಷಯ ಪ್ರಸ್ತಾಪಿಸಿದ್ದು ಈ ಕುರಿತು ಸಂಬಂಧಪಟ್ಟ ಇಲಾಖಾ ಸಚಿವರ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿ ಮಾತನಾಡಿ, ರಾಜ್ಯದ 5950 ಗ್ರಾಮ ಪಂಚಾಯತಿಗಳ ಪೈಕಿ ಅತ್ಯಂತ ಸುಸಜ್ಜಿತ ಹಾಗೂ ಮಾದರಿ ಗ್ರಾಮ ಪಂಚಾಯತ್ ಕಟ್ಟಡ ಇದ್ದರೆ ಅದು ನೀರೆ ಗ್ರಾಮ ಪಂಚಾಯತ್ ಕಟ್ಟಡ ಸಾಕ್ಷಿಯಾಗಿದೆ.ಅಧಿಕಾರ ವಿಕೇಂದ್ರೀಕರಣ ಪರಿಕಲ್ಪನೆಯಲ್ಲಿ ಗ್ರಾಮ ಪಂಚಾಯತಿಗಳು ಗ್ರಾಮದ ಸರ್ಕಾರದಂತೆ ಕರ್ತವ್ಯ ನಿರ್ವಹಿಸುತ್ತವೆ.ಸರ್ಕಾರದ
29 ಇಲಾಖೆಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕುಡಿಯುವ ನೀರಿನ ಜಲಜೀವನ್ ಯೋಜನೆಯನ್ನು ಗ್ರಾಮ ಪಂಚಾಯತಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.9/11 ಕುರಿತು ಜಿಲ್ಲಾ ಯೋಜನಾ ಪ್ರಾಧಿಕಾರಕ್ಕೆ ನೀಡಿದ ಬದಲಿಗೆ ಗ್ರಾಮ ಪಂಚಾಯತಿಗಳಿಗೆ ಕೊಟ್ಟಾಗ ಜನರಿಗೆ ಅನುಕೂಲವಾಗುವ ಜೊತೆಗೆ ಪಂಚಾಯತಿಗಳಿಗೆ ಶಕ್ತಿ ತುಂಬಿದಂತಾಗುತ್ತದೆ ಎಂದರು.
ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಸರ್ಕಾರಿ ಕಚೇರಿಗಳು ಜನಸ್ನೇಹಿಯಾಗಿರಬೇಕು.ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸುವ ಮನೋಭಾವ ರೂಢಿಸಿಕೊಳ್ಳಬೇಕು.ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರವೇ ಅನುದಾನ ಒದಗಿಸಲು ಸಾಧ್ಯವಿಲ್ಲ ದಾನಿಗಳ ಸಹಕಾರ ಕೂಡ ಮುಖ್ಯ,ದಾನಿಗಳ ಸಹಕಾರದಿಂದ ನೀರೆ ಪಂಚಾಯತ್ ಕಟ್ಟಡ ಅತ್ಯಂತ ಸುಂದರವಾಗಿ ನಿರ್ಮಾಣವಾಗಿದೆ ಎಂದರು.
ಉಡುಪಿ ಜಿಲ್ಲೆಯ 9/11 ಹಾಗೂ ಕೆಂಪು ಕಲ್ಲು ಸಾಗಾಟ ನಿರ್ಬಂಧದ ಕುರಿತು ಮಾತನಾಡಿದ ಸುನಿಲ್, ಕಾರ್ಕಳ ತಾಲೂಕಿನ 9/11 ಸಂಬಂಧಿತ 4500 ಅರ್ಜಿಗಳು ಯೋಜನಾ ಪ್ರಾಧಿಕಾರದಲ್ಲಿ ಬಾಕಿ ಇದೆ. ಆದ್ದರಿಂದ 9/11 ಗ್ರಾಮ ಪಂಚಾಯತಿ ಮಟ್ಟದಲ್ಲೇ ನೀಡುವಂತಾಗಬೇಕು ಇದರ ಜೊತೆಗೆ ಕೆಂಪು ಕಲ್ಲು ಗಣಿಗಾರಿಕೆ ಸಮಸ್ಯೆಯಿಂದ ಈಗಾಗಲೇ ಕಟ್ಟಡ ಕಾಮಗಾರಿ ಸ್ಥಗಿತದಿಂದ ಸಾವಿರಾರು ಕೂಲಿಕಾರ್ಮಿಕರು ಅತಂತ್ರರಾಗಿದ್ದಾರೆ. ಟಿಪ್ಪರ್ ಲಾರಿಗಳು ಹರಾಜಿಗೆ ಬಂದು ಅವರ ಕುಟುಂಬ ಬೀದಿಪಾಲಾಗಿದೆ.ಈ ನಿಟ್ಟಿನಲ್ಲಿ ನಿಯಮಾವಳಿ ಸರಳೀಕರಣ ಮಾಡಬೇಕು ಎಂದು ಆಗ್ರಹಿಸಿದರು.
ರಸ್ತೆ ದುರಸ್ತಿ ಕುರಿತು ಸಚಿವರ ಗಮನ ಸೆಳೆದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳು ಸ್ವಾಗತಾರ್ಹ ಆದರೆ ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗದಂತೆ ಸರ್ಕಾರ ಕ್ರಮವಹಿಸಬೇಕು.ಉಡುಪಿ ಮಂಗಳೂರು ಜಿಲ್ಲೆಗಳಿಗೆ ರಸ್ತೆಗಳ ಗುಂಡಿ ಮುಚ್ಚಲು ವಿಶೇಷ ಅನುದಾನ ಕೊಡುವಂತೆ ಆಗ್ರಹಿಸಿದರು.

ಸಭೆಯಲ್ಲಿ ಗಮನಸೆಳೆದ ಐವರು ಗರ್ಭಿಣಿಯರಿಗೆ ಸೀಮಂತ‌!
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಕಳ ಶಿಶು ಅಭಿವೃದ್ಧಿ ಯೋಜನೆಯ ಪೋಷಣ್ ಅಭಿಯಾನ ಯೋಜನೆಯಡಿ ಸಮುದಾಯ ಆಧಾರಿತ ಕಾರ್ಯಕ್ರಮದಲ್ಲಿ ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗರ್ಭಿಣಿಯರಿಗೆ ಸಾಂಕೇತಿಕವಾಗಿ ಸೀಮಂತ‌ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಐವರು ಮಹಿಳೆಯರಿಗೆ ಸಿಹಿ‌ ತಿನಿಸುವ ಮೂಲಕ ಸೀಮಂತ‌ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಲ್ಲದೇ ಈ ಭವ್ಯ ಕಟ್ಟಡ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸಿದ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಎಸ್ ಪ್ರಭು ಹಾಗೂ ಪಿಡಿಓ ಅಂಕಿತಾ ನಾಯಕ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ನೀರೆ ಗ್ರಾಮ ಪಂಚಾಯತಿ ಅಧ್ಯಕ್ಷ ಸಚ್ಚಿದಾನಂದ ಎಸ್.ಪ್ರಭು, ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಜಿತ್ ಹೆಗ್ಡೆ, ಉದಯ್ ಕುಮಾರ್ ‌ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಕಾರ್ಕಳ ತಹಶಿಲ್ದಾರ್ ಪ್ರದೀಪ್ ಆರ್, ತಾಲೂಕು ಪಂಚಾಯತ್ ಇಒ ಪ್ರಶಾಂತ್ ರಾವ್ ಮುಂತಾದವರು ‌ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್ ಸ್ವಾಗತಿಸಿ,
ಕಣಂಜಾರು ಬ್ರಹ್ಮಲಿಂಗೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *