ಉಡುಪಿ: ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಶತಸಿದ್ಧ. ಪ್ರಚಾರದ ವೇಳೆ ಕಾಂಗ್ರೆಸ್ ಪರ ಮತದಾರರ ಉದ್ಘೋಷವನ್ನು ಕೇಳಿ ಕಂಗಾಲಾಗಿರುವ ಬಿಜೆಪಿ ನಾಯಕರು ಇದೀಗ ಕಾಂಗ್ರೆಸ್ ಪಕ್ಷದ ಪ್ರಚಾರ ವೈಖರಿಯನ್ನು ಟೀಕಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.
ಚುನಾವಣಾ ಆಖಾಡದಲ್ಲಿ ತನ್ನ ಆಡಳಿತಾವದಿಯಲ್ಲಿ ತನ್ನ ಪಕ್ಷ ಮಾಡಿದ ಜನಸ್ಪಂದನೆಯ ಅಭಿವೃದ್ದಿಯ ಸಾಧನೆಗಳ ಬಗ್ಗೆ ಮತ್ತು ಮುಂದೆ ತನ್ನ ಪಕ್ಷ ಮಾಡಲು ಉದ್ದೇಶಿಸಿರುವ ಜನಪರ ಕೆಲಸಗಳ ಕುರಿತು ಮತದಾರರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿ ಮತ ಯಾಚಿಸುವುದು ಯಾವುದೇ ಪಕ್ಷದ ಸಾಂವಿಧಾನಿಕ ಬದ್ಧತೆಯ ಹಕ್ಕು. ಇದನ್ನು ನಿರಾಕರಿಸುವುದು ಅಥವಾ ವಿರೋಧಿಸುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸರ್ವಾಧಿಕಾರದ ಗುರಿ ಸಾಧನೆಯ ಗುಂಗಿನಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಿ ದೇಶಾಧ್ಯಂತ ಒಬ್ಬನ ಹೆಸರಲ್ಲಿ ಮತಯಾಚಿಸುವ ಬಿಜೆಪಿಗೆ ಚುನಾವಣಾ ಕಣದಲ್ಲಿ ಜನರ ಮುಂದಿಡಲು ಹೇಳಿಕೊಳ್ಳ ಬಹುದಾದ ಮಾಡಿದ ದೊಡ್ಡ ಸಾಧನೆಗಳೂ ಇಲ್ಲ , ಭವಿಷ್ಯದ ಅಭಿವೃದ್ದಿಯ ಯೋಜನೆಗಳ ಬಗ್ಗೆ ಸ್ಷಷ್ಟ ಗುರಿಯೂ ಇಲ್ಲ. ಬಿಜೆಪಿಯ ಸುಳ್ಳು ಭರವಸೆಗಳ ಮೇಲೆ ಜನ ಈಗಾಗಲೇ ಭ್ರಮನಿರಸನಗೊಂಡು ಹತಾಶರಾಗಿ ಕಾಂಗ್ರೆಸ್ಸಿನತ್ತ ಮುಖ ಮಾಡಿದ್ದಾರೆ ಎಂದರು
ಕಾಂಗ್ರೆಸ್ ಸಮರ್ಥ ರಾಷ್ಟ್ರೀಯ ನಾಯಕತ್ವದ ಹೊರತಾಗಿಯೂ ಆಯಾ ಕ್ಷೇತ್ರದ ಅಭ್ಯರ್ಥಿಗಳ ಸಾಧನೆಯ ಸಾಮರ್ಥ್ಯ ಮತ್ತು ಪಕ್ಷದ ತತ್ವ ಸಿದ್ಧಾಂತದಡಿಯಲ್ಲಿ ಮತಯಾಚಿಸಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದೆ. ಐದು ಗ್ಯಾರಂಟಿಗಳ ಮೂಲಕ ಮಹಿಳೆಯರ ಮಾನಸೀಕತೆ ಬದಲಾಗಿದೆ ಎಂದು ಠೀಕಿಸುವ ಬಿಜೆಪಿಯ ಅಭ್ಯರ್ಥಿಗಳಿಗೆ ಕಾಂಗ್ರೆಸ್ಸಿನ ಈ ಯೋಜನೆಯಿಂದ ಮಹಿಳೆಯರ ಸಂಕಷ್ಟದ ಬದುಕು ಬದಲಾಗಿದೆ ಎಂಬ ಸತ್ಯದ ಅರಿವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.