ಕಾರ್ಕಳ: ಕೇಂದ್ರದಲ್ಲಿ ಹಿಟ್ಲರ್ ಸರ್ಕಾರವಿದೆ. ನರೇಂದ್ರ ಮೋದಿ ಒಬ್ಬ ಹಿಟ್ಲರ್, ಅವರ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಉದ್ದೇಶವಾಗಿದೆ ಎಂದು ಮಾಜಿ ಸಿಎಂ,ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಅವರು ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ಮೀನುಗಾರರಿಗೆ ಯಾವ ಸೌಕರ್ಯಗಳನ್ನು ಕೂಡ ಬಿಜೆಪಿ ಸರ್ಕಾರ ಕಲ್ಪಿಸಿಲ್ಲ.ಮಂಗಳೂರಿನ ಅಳಿವೆ ಬಂದರಿನಲ್ಲಿ ಹೂಳೆತ್ತುವ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಉಡುಪಿ, ಕಾರವಾರ ಮೀನುಗಾರಿಕಾ ಬಂದರುಗಳ ಹೂಳೆತ್ತುವ ಕೆಲಸವಾಗಬೇಕಿದೆ. ಮೀನುಗಾರರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಪ್ರಸ್ತಾವನೆ ನಮ್ಮ ಮುಂದಿದೆ ಎಂದರು.
ಮೋದಿ ಅಧಿಕಾರಕ್ಕೆ ಬಂದ ಬಳಿಕ ಕನ್ನಡಿಗರ ಕಡೆಗಣನೆಯಾಗಿದೆ.ಕರ್ನಾಟಕಕ್ಕೆ ಸಿಗಬೇಕಿದ್ದ 30 ಸಾವಿರ ಮೆಡಿಕಲ್ ಸೀಟುಗಳು ಅನ್ಯ ರಾಜ್ಯದ ಪಾಲಾಗುತ್ತಿವೆ.ಇದಕ್ಕೆ ಮೋದಿಯವರ ನೀಟ್ ವ್ಯವಸ್ಥೆ ಕಾರಣವಾಗಿದೆ.ನಾನು ಮುಖ್ಯಮಂತ್ರಿಯಾಗಿದ್ದಾಗ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯ ಅಂಶಗಳ ಪ್ರಕಾರ ಪರಿಶಿಷ್ಟ ಜಾತಿಯ 15%ಮೀಸಲಾತಿ 18% ಏರಿಕೆ, ಎಸ್ಟಿ ಸಮುದಾಯದ 3% ಮೀಸಲಾತಿಯನ್ನು 5% ಏರಿಕೆ ಮಾಡಿದ್ದೇನೆ ಎಂದರು. ಎಲ್ಲರನ್ನೂ ಜತೆಯಾಗಿ ತೆಗೆದುಕೊಂಡು ಹೋಗುವವನು ನಿಜವಾದ ಆಡಳಿತಗಾರ,ಆದರೆ ಮೋದಿಯವರು ಹಿಟ್ಲರ್ ರೀತಿ ಆಡಳಿತ ನಡೆಸುತ್ತಿದ್ದಾರೆ ಎಂದು ಮೊಯ್ಲಿ ಆರೋಪಿಸಿದರು. ನಮ್ಮ ಇಂಡಿಯಾ ಮೈತ್ರಿಕೂಟದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ದೇಶ,ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಬೇಕೆನ್ನುವ ನಿಟ್ಟಿನಲ್ಲಿ ನಾವು ಒಗ್ಗಟ್ಟಾಗಿ ಮೋದಿ ನೇತೃತ್ವದ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಮಾಡುತ್ತೇವೆ ಎಂದರು.
ಚುನಾವಣಾ ಬಾಂಡ್ ಮೂಲಕ ಬಿಜೆಪಿ ಕೋಟಿಗಟ್ಟಲೆ ಭ್ರಷ್ಟಾಚಾರ ಮಾಡಿದೆ. ಒಇ ಬಾರಿಯ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಅನುದಾನ ಮೀಸಲಿರಿಸಿದ್ದಾರೆ ಆದರೆ ಈವರೆಗೂ ನಯಾಪೈಸೆ ಬಿಡುಗಡೆಯಾಗಿಲ್ಲ. ಹಸಿವಿನಲ್ಲಿ ಬಡವರು ಪರದಾಡುತ್ತಿದ್ದಾರೆ,ಯುವಕರಿಗೆ ಉದ್ಯೋಗವಿಲ್ಲ,ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಸುಳ್ಳು ಹೇಳಿದ ಮೋದಿ ರೈತರ ಸಾಲ ಮನ್ನಾ ಮಾಡಿಲ್ಲ ಬದಲಾಗಿ ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿ ರೈತರಿಗೆ ಮೋಸ ಮಾಡಿದ್ದಾರೆ.
ಭೇಟಿ ಬಚಾವೋ ಭೇಟಿ ಪಡಾವೋ ಎನ್ನುವವರು ನಿರ್ಭಯಾ ನಿಧಿಯನ್ನು ನುಂಗಿ ಹಾಕಿದ್ದಾರೆ. ಇದಕ್ಕೆ ಮೋದಿಯವರು ಸ್ಪಷ್ಟನೆ ಕೊಡಬೇಕು.
ಪರಶುರಾಮನಿಗೆ ಅನ್ಯಾಯ ಮಾಡಿದ ಸುನಿಲ್ ಕುಮಾರ್ ಹಿಂದುತ್ವ ಕ್ಕೆ ದ್ರೋಹ ಮಾಡಿದ್ದಾರೆ.ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದರು.ಈ ಬಾರಿ ಕಾರ್ಕಳದಲ್ಲಿ ಕಾಂಗ್ರೆಸ್ 15 ರಿಂದ 20 ಸಾವಿರ ಮೇಲ್ಪಟ್ಟು ಮುನ್ನಡೆ ಸಾಧಿಸಲಿದೆ ಎಂದರು.
ಅಣ್ಣಾಮಲೈ ಒಬ್ಬ ಸ್ಪಂಟ್ ಮಾಸ್ಟರ್, ಅವರು ಕೇವಲ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಬರುತ್ತಾರೆ, ಅವರಿಂದ ಬಿಜೆಪಿ ಗೆ ಲಾಭವಾಗದು ಎಂದು ಮೊಯ್ಲಿ ಹೇಳಿದರು.
ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ರಾಜ್ಯ ಸರ್ಕಾರದ ಅನ್ನಭಾಗ್ಯ, ಗೃಹಲಕ್ಷ್ಮೀ ,ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆಗಳಿಂದ ಜನರ ಜೀವನ ಮಟ್ಟ ಸುಧಾರಿಸಿದೆ. ಉಡುಪಿ ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿ ಜಯಪ್ರಕಾಶ್ ಹೆಗ್ಗಡೆಯವರನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಡಿ.ಆರ್ ರಾಜು, ಮಂಜುನಾಥ ಪೂಜಾರಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ,ಸುಧಾಕರ ಕೋಟ್ಯಾನ್, ಸುರೇಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್’ಚಂದ್ರ ಪಾಲ್, ಪ್ರಭಾಕರ ಬಂಗೇರ, ಇಂಟಕ್ ಅಧ್ಯಕ್ಷ ಕಿರಣ್ ಹೆಗ್ಡೆ, ಜಾರ್ಜ್ ಕ್ಯಾಸ್ಟಲಿನೋ, ಸಿರಿಯಣ್ಣ ಶೆಟ್ಟಿ,ಕುಶ ಆರ್ ಮೂಲ್ಯ,ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಉಪಸ್ಥಿತರಿದ್ದರು