

ನವದೆಹಲಿ, ಆ. 18: ಬಾಹ್ಯಾಕಾಶ ಯಾನ ಮುಗಿಸಿ ಯಶಸ್ವಿಯಾಗಿ ಭೂಮಿ ಮರಳಿದ ಭಾರತದ ಹೆಮ್ಮೆಯ ಪುತ್ರ ಕ್ಯಾ. ಶುಭಾಂಶು ಶುಕ್ಲಾ ಅವರು ಭಾರತಕ್ಕೆ ಆಗಮಿಸಿದ್ದು, ಅವರನ್ನು ಗೌರವಿಸಲು ಸಂಸತ್ತು ಸಜ್ಜಾಗಿದೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 14 ದಿನಗಳ ಕಾಲ ಅಧ್ಯಯನ ನಡೆಸಿ ಭಾರತದ ಕೀರ್ತಿಯನ್ನು ವಿಶ್ವಕ್ಕೆ ಪಸರಿಸಿದ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ
ಅವರ ಈ ಸಾಧನೆ “ರಾಷ್ಟ್ರಕ್ಕೆ ಐತಿಹಾಸಿಕ ಮೈಲಿಗಲ್ಲು” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬಣ್ಣಿಸಿದ್ದಾರೆ. ಅವರ ಸಾಧನೆಯನ್ನು ಆಚರಿಸಲು ಮತ್ತು ಭಾರತದ ಭವಿಷ್ಯದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳನ್ನು ದೇಶದ ಯುವ ವಿಜ್ಞಾನಿಗಳಿಗೆ ತಿಳಿಸಲು ಉಭಯ ಸದನಗಳಲ್ಲಿ ವಿಶೇಷ ಚರ್ಚೆ ನಡೆಯಲಿದೆ ಎಂದು ರಿಜಿಜು ಹೇಳಿದ್ದಾರೆ.














