ಬೆಂಗಳೂರು: ಬರ ಪರಿಹಾರ ವಿತರಣೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ
ರಾಜ್ಯದ ಬೇಡಿಕೆಗೆ ಸ್ಪಂದಿಸಸ ಕೇಂದ್ರ ಸರ್ಕಾರ ಕೇವಲ 3,454 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿದೆ. ಇದು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಇಂದು ಬೆಂಗಳೂರಿನ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಘೋಷಣೆ ಬಹಳ ಕಡಿಮೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ರಾಜ್ಯ ಸಚಿವ ಸಂಪುಟ ಸದಸ್ಯರು, ಶಾಸಕರು ಭಾನುವಾರ ಪ್ರತಿಭಟನೆ ನಡೆಸಿದರು. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ಮೇ 7ರಂದು ನಡೆಯಲಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಲು ನಿನ್ನೆ ರಾತ್ರಿಯೇ ಬೆಳಗಾವಿಗೆ ಪ್ರಧಾನಿ ಮೋದಿ ಆಗಮಿಸಿದ್ದು, ಇನ್ನು ಕೆಲವೇ ಹೊತ್ತಿನಲ್ಲಿ ಬೆಳಗಾವಿಯಲ್ಲಿ ಪ್ರಚಾರ ಆರಂಭವಾಗಲಿದೆ. ಈ ಸಂದರ್ಭದಲ್ಲಿಯೇ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ಪ್ರಧಾನಿಯವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಬರ ಪರಿಹಾರ ಮೊತ್ತ ಬಿಡುಗಡೆಯಲ್ಲಿ ಕರ್ನಾಟಕ ಜನತೆಗೆ ಮೋಸ ಮಾಡಿದ ಬಿಜೆಪಿಗೆ ಧಿಕ್ಕಾರ, ರೈತರಿಗೆ ಕಡಿಮೆ ಪರಿಹಾರ ಕೊಟ್ಟ ಬಿಜೆಪಿಗೆ ಧಿಕ್ಕಾರ ಎಂದು ಭಿತ್ತಿ ಫಲಕಗಳನ್ನು ಪ್ರದರ್ಶಿಸಿ, ಚೊಂಬು ಕೈಯಲ್ಲಿ ಹಿಡಿದು ಘೋಷಣೆ ಕೂಗಿದರು.
ಗೋ ಬ್ಯಾಕ್ ಗೋ ಬ್ಯಾಕ್ ಮೋದಿ ಗೋ ಬ್ಯಾಕ್ ಎಂದು ಕೂಗಿದರು. ಬಿಜೆಪಿ ಸುಳ್ಳಿನ ಲೂಟಿ ಸರ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು