ಬೆಂಗಳೂರು: ರಾಜ್ಯದ ಡಿಪ್ಲೋಮಾ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಾತ್ರದ ನಿರ್ಧಾರ ಕೈಗೊಂಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಆರನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಕಡ್ಡಾಯಗೊಳಿಸಲು ನಿರ್ಧರಿಸಿದೆ. ಸದ್ಯ ಈ ವಿಚಾರವಾಗಿ ಕರಡು ಪ್ರತಿ ಸಿದ್ಧಪಡಿಸಿ ಉದ್ಯಮ ವಲಯದ ಪ್ರತಿಕ್ರಿಯೆ ಕೋರಲಾಗಿದೆ. ಶೀಘ್ರದಲ್ಲೇ ಆದೇಶ ಪ್ರಕಟವಾಗುವ ನಿರೀಕ್ಷೆ ಇದೆ.
ಪ್ರಸ್ತುತ ಪಠ್ಯಕ್ರಮದಲ್ಲಿ ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಐಚ್ಛಿಕವಾಗಿದೆ. ಆದರೆ, ಇದೀಗ 6 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಲಾಗಿದೆ. ಕಡ್ಡಾಯ ಇಂಟರ್ನ್‌ಶಿಪ್ ವಿದ್ಯಾರ್ಥಿಗಳನ್ನು ಕೆಲಸಕ್ಕೆ ಅಣಿಗೊಳಿಸುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ನಾವು ಕೈಗಾರಿಕೆಗಳೊಂದಿಗೆ ಸಮಾಲೋಚಿಸಿ ಸಿ -25 ಪಠ್ಯಕ್ರಮವನ್ನು ರೂಪಿಸಿದ್ದೇವೆ. ಈ ವಿಚಾರಕ್ಕೆ ಸಂಬಂಧಿಸಿದ ಸಮಾಲೋಚನೆಯ ಸಮಯದಲ್ಲಿ, ಉದ್ಯಮ ವಲಯದ ಪ್ರತಿನಿಧಿಗಳು ಪ್ರಾಯೋಗಿಕ ಅನುಭವದ ಅಗತ್ಯದ ಬಗ್ಗೆ ಹೇಳಿದ್ದರು. ಆದ್ದರಿಂದ, ಇಂಟರ್ನ್‌ಶಿಪ್ ಕಡ್ಡಾಯಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.