Share this news

ನವದೆಹಲಿ: ಮಸೀದಿ ಆವರಣದಲ್ಲಿ ಜೈ ಶ್ರೀರಾಂ ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗೆ ಧಕ್ಕೆಯಾಗುವುದಿಲ್ಲ ಎಂಬ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಸೋಮವಾರ ಈ ಅರ್ಜಿಯ ಸಂಬAಧ ವಿಚಾರಣೆ ನಡೆಸಿದ್ದು, ಕರ್ನಾಟಕ ಪೊಲೀಸರ ಅಭಿಪ್ರಾಯ ಕೋರಿದೆ. ಮಸೀದಿ ಬಳಿ ಜೈ ಶ್ರೀರಾಂ ಘೋಷಣೆ ಹೇಗೆ ಅಪರಾಧ? ಈ ಬಗ್ಗೆ ನಿಮ್ಮ ನಿಲುವು ತಿಳಿಸಿ ಎಂದು ಕರ್ನಾಟಕ ಪೊಲೀಸರಿಗೆ ಸೂಚಿಸಿದೆ.

ಆರೋಪಿಗಳು ನಿರ್ದಿಷ್ಟವಾದ ಒಂದು ಧಾರ್ಮಿಕ ಘೋಷಣೆಯನ್ನು ಕೂಗಿದ್ದಾರೆ ಎನ್ನಲಾಗಿದೆ. ಅದು ಹೇಗೆ ಅಪರಾಧ ಎಂದು ಪ್ರಶ್ನಿಸಿರುವ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು 2025ರ ಜನವರಿ ತಿಂಗಳಿನಲ್ಲಿ ನಡೆಸುವುದಾಗಿ ತಿಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಕಡಬ-ಮರ್ದಾಳ ರಸ್ತೆಯಲ್ಲಿರುವ ಮಸೀದಿ ಆವರಣದಲ್ಲಿ 2023ರ ಸೆಪ್ಟೆಂಬರ್ ನಲ್ಲಿ ಅಪರಿಚಿತ ವ್ಯಕ್ತಿಗಳು ಜೈ ಶ್ರೀ ರಾಮ್ ಎಂದು ಘೋಷಣೆಗಳನ್ನು ಕೂಗಿದ್ದರು. ಬ್ಯಾರಿ ಸಮುದಾಯಕ್ಕೆ ಸೇರಿದವರನ್ನು ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ಕಡಬ ಠಾಣೆಯ ಪೊಲೀಸರಿಗೆ ಮಸೀದಿ ಆಡಳಿತ ದೂರು ನೀಡಿತ್ತು. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗಿರುವ ಈ ವ್ಯಕ್ತಿಗಳು ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ನಂತರ, ದಕ್ಷಿಣ ಕನ್ನಡದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನಿವಾಸಿ ಕೀರ್ತನ್ ಕುಮಾರ್ ಮತ್ತು ಎನ್ ಎಂ ಸಚಿನ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 447, 295 ಎ 505 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ಸಂಬAಧ ಪುತ್ತೂರಿನ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸಬೇಕೆಂದು ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ಯಾರಾದರೂ ಜೈ ಶ್ರೀರಾಮ್ ಎಂದು ಕೂಗಿದರೆ ಅದು ಯಾವುದೇ ವರ್ಗದ ಧಾರ್ಮಿಕ ಭಾವನೆಯನ್ನು ಹೇಗೆ ಕೆರಳಿಸುತ್ತದೆ ಎಂಬುದು ಅರ್ಥವಾಗುವುದಿಲ್ಲ. ಘೋಷಣೆ ಕೂಗಿದ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದು ದೂರುದಾರರೇ ಹೇಳಿರುವಾಗ, ಘೋಷಣೆಯು ಘರ್ಷಣೆಗೆ ಕಾರಣವಾಗಬಹುದು ಎನ್ನಲಾಗದು ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಪುತ್ತೂರಿನ ಎರಡನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸಿತ್ತು.

ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್, ಕರ್ನಾಟಕ ಸರ್ಕಾರ ಹಾಗೂ ಪೊಲೀಸರ ಅಭಿಪ್ರಾಯ ಕೋರಿದ್ದು, ಮುಂದಿನ ವಿಚಾರಣೆ ಜನವರಿಯಲ್ಲಿ ನಡೆಯಲಿದೆ.

 

Leave a Reply

Your email address will not be published. Required fields are marked *