ತಿರುವನಂತಪುರಂ: ವಯನಾಡಿನಿಂದ ಸ್ಪರ್ಧೆ ಮಾಡಿರುವ ರಾಹುಲ್ ಗಾಂಧಿ ವಿರುದ್ಧ ಎಡಪಕ್ಷಗಳು ಹರಿಹಾಯುತ್ತಲೇ ಇವೆ. ಈ ಮಧ್ಯೆ ರಾಹುಲ್ ಗಾಂಧಿ ಅವರ ಡಿಎನ್‌ಎ ಪ್ರಶ್ನಿಸಿ ಸಿಪಿಎಂ ಬೆಂಬಲಿತ ಪಕ್ಷೇತರ ಶಾಸಕ ಅನ್ವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಲಪ್ಪುರಂನ ಪಕ್ಷದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅನ್ವರ್, ರಾಹುಲ್ ಅವರಿಗೆ ಗಾಂಧಿ ಹೆಸರನ್ನು ಬಳಸುವ ಹಕ್ಕು ಇಲ್ಲ. ಅವರು ನಾಲ್ಕನೇ ದರ್ಜೆಯ ನಾಗರಿಕರ ಮಟ್ಟಕ್ಕೆ ಕುಸಿದಿದ್ದಾರೆ. ಅವರು ನೆಹರೂ ಕುಟುಂಬದಲ್ಲಿ ಜನಿಸಿದ್ದಾರಾ ಎಂಬುದರ ಬಗ್ಗೆ ನನಗೆ ಅನುಮಾನವಿದೆ. ಹೀಗಾಗಿ ಅವರ ಡಿಎನ್ಎ ಪರೀಕ್ಷಿಸಬೇಕು ಎಂದು ಹೇಳಿದ್ದಾರೆ. ಈ ಹೇಳಿಕೆಯ ಬಗ್ಗೆ ಗರಂ ಆಗಿರುವ ಕಾಂಗ್ರೆಸ್, ಅನ್ವರ್ ಆಕ್ಷೇಪಾರ್ಹ ಹೇಳಿಕೆ ಹಿಂದೆ ಸಿಎಂ ಪಿಣರಾಯ್ ಪಾತ್ರವಿದೆ ಎಂದು ಆರೋಪಿಸಿದೆ.
ಕೂಡಲೇ ಅವರ ವಿರುದ್ಧ ಕ್ರಮಕ್ಕೆ ಕೋರಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ರಾಹುಲ್ ವ್ಯಂಗ್ಯವಾಡಿದ ಬಗ್ಗೆ ಟೀಕಿಸಿದ ಬಳಿಕ ಈ ಹೇಳಿಕೆ ಪ್ರಕಟವಾಗಿದೆ. ಮಂಗಳವಾರ ವಿಜಯನ್ ಅವರು ಅನ್ವರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪಿಣರಾಯಿ ವಿಜಯನ್ ಮಾತನಾಡಿ, ರಾಹುಲ್ ಗಾಂಧಿ ಮಾತನಾಡುವಾಗ ಜಾಗರೂಕವಾಗಿರಬೇಕು. ರಾಹುಲ್ ಈಗ ಬದಲಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ರಾಷ್ಟ್ರದ ಉದ್ದಗಲಕ್ಕೂ ನಡೆದಾಡಿದ್ದರಿಂದ ರಾಹುಲ್ ಜ್ಞಾನ ಸಂಪಾದಿಸಿರಬಹುದೆಂದು ನಾನು ಭಾವಿಸಿದ್ದೆ. ಆದರೆ ಅವರು ಕೇರಳದಲ್ಲಿ ನೀಡಿದ ಹೇಳಿಕೆ ರಾಜಕೀಯ ನಾಯಕನಿಗೆ ಶೋಭೆ ತರುವುದಿಲ್ಲ. ಈ ರೀತಿಯ ಹೇಳಿಕೆ ನೀಡಿ ಬಿಜೆಪಿಗೆ ಅವರು ಸಹಾಯ ಮಾಡಬಾರದು ಎಂದು ಹೇಳಿದರು.