ಶ್ರೀಹರಿಕೋಟಾ(ಆಂಧ್ರಪ್ರದೇಶ):ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾಯಿಸಿದ ಪಿಎಸ್‌ಎಲ್‌ವಿ-ಸಿ61 ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭೂ ವೀಕ್ಷಣಾ ಉಪಗ್ರಹದ ಉಡಾವಣೆ ವಿಫಲವಾಗಿದೆ.
ಭಾನುವಾರ ಮುಂಜಾನೆ 5.59 ಕ್ಕೆ ಆಂದ್ರಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಇಸ್ರೊ ತನ್ನ 101ನೇ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು.
1696.24 ಕೆಜಿ ತೂಕದ ರಾಕೆಟ್ 1 ನೇ ಹಾಗೂ 2ನೇ ಹಂತದಲ್ಲಿ ಯಶಸ್ವಿಯಾಗಿ ಪ್ರಜ್ವಲನ ಮುಗಿಸಿ ಮೂರನೇ ಹಂತದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಯೋಜನೆ ವಿಫಲವಾಯಿತು ಎಂದು ಇಸ್ರೋದ ಮುಖ್ಯಸ್ಥ ವಿ.ನಾರಾಯಣನ್ ತಿಳಿಸಿದ್ದಾರೆ.
ನಮ್ಮ ಮಿಷನ್ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ವಿಶ್ಲೇಷಣೆಯ ನಂತರ ನಾವು ಮತ್ತೆ ಮಾಹಿತಿಯನ್ನು ಒದಗಿಸುತ್ತೇವೆ ಎಂದು ಹೇಳಿದ್ದಾರೆ. ಭಾನುವಾರ ಬೆಳಗ್ಗೆ 5.59 ಕ್ಕೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C61) ರಾಕೆಟ್ ಮೂಲಕ ಇಸ್ರೋ ಭೂ ವೀಕ್ಷಣಾ ಉಪಗ್ರಹ EOS-09 ಅನ್ನು ಬಾಹ್ಯಾಕಾಶಕ್ಕೆ ಉಡಾಯಿಸಿತು.ಈ ಉಪಗ್ರಹ ಉಡಾವಣೆ ಯಶಸ್ವಿ ಆಗಿದ್ದರೆ ಇದು ನಮಗೆ ಗಡಿ ಕಾಯುವಿಕೆ, ಬೇಹುಗಾರಿಕೆ, ರಾಷ್ಟ್ರೀಯ ಭದ್ರತೆಗೆ ಸಾಥ್ ನೀಡುತ್ತಿತ್ತು. ವಿಪತ್ತು ನಿರ್ವಹಣೆ ಸಮಯದಲ್ಲೂ ಸಹ ನೆರವಾಗುತ್ತಿತ್ತು. ಆದರೆ ಈಗ ತಾಂತ್ರಿಕ ಕಾರಣದಿಂದ ಉಡಾವಣೆ ಯಶಸ್ವಿ ಆಗಲಿಲ್ಲ ಎನ್ನಲಾಗಿದೆ.
ಈ ಯೋಜನೆಯನ್ನು ಮತ್ತೆ ಮುಂದುವರಿಸುವುದಾಗಿ ನಾರಾಯಣನ್ ತಿಳಿಸಿದ್ದಾರೆ.