ಕಾರ್ಕಳ: ಶಿಕ್ಷಕರ ಮಾರ್ಗದರ್ಶನ ಹಾಗೂ ತಮ್ಮ ಸ್ವಂತ ಪರಿಶ್ರಮ ಹಾಗೂ ಬುದ್ದಿಮತ್ತೆ ಬಳಸಿಕೊಂಡು ವಿನೂತನ ಆವಿಷ್ಕಾರವು ರಾಷ್ಟ್ರಮಟ್ಟದ ಇನ್ಸ್ಪಾಯರ್ ಅವಾರ್ಡ್ ಪಡೆದಿರುವುದು ಕಾರ್ಕಳ ತಾಲೂಕಿಗೆ ಸಂದ ಗೌರವವಾಗಿದೆ. ಖಾಯಂ ಶಿಕ್ಷಕರ ಕೊರತೆ ನಡುವೆಯೂ ಸರ್ಕಾರಿ ಶಾಲೆಯಲ್ಲಿ ಕಲಿತು ಇಂತಹ ಪ್ರಶಸ್ತಿ ಪಡೆದಿರುವುದು ಸಣ್ಣ ಸಂಗತಿಯಲ್ಲ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು
ಅವರು ಕಾರ್ಕಳ ತಾಲೂಕಿನ ಕುಕ್ಕುಜೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ರಾಷ್ಟçಮಟ್ಟದಲ್ಲಿ ಸಾಧನೆಗೈದ ನಾಲ್ವರು ವಿದ್ಯಾರ್ಥಿಗಳು ಸನ್ಮಾನಿಸಿ ಮಾತನಾಡಿ, ಅಧ್ಯಾಪಕರ ತರಬೇತಿ ಹಾಗೂ ಪ್ರೋತ್ಸಾಹ ಸಿಕ್ಕಾಗ ವಿದ್ಯಾರ್ಥಿಗಳು ಸ್ಪೂರ್ತಿ ಪಡೆದು ಹೊಸ ಆವಿಷ್ಕಾರ ಮಾಡಲು ಸಾಧ್ಯವಾಗಿದೆ. ಕೇವಲ ಪಠ್ಯ ಪುಸ್ತಕ ಓದಿ ಫಲಿತಾಂಶ ಪಡೆಯುವುದೇ ಶಿಕ್ಷಣವಲ್ಲ, ಹೊಸನತದ ಆಲೋಚನೆಯ ಮೂಲಕ ಆವಿಷ್ಕಾರದಂತನೆಯೂ ಕೂಡ ಶಿಕ್ಷಣದ ಭಾಗವಾಗಿದೆ. ಯಾವುದೇ ಮೂಲಸೌಕರ್ಯಗಳು ಇಲ್ಲದಿದ್ದರೂ ಲಭ್ಯವಿರುವ ಸೌಕರ್ಯಗಳನ್ನೇ ಬಳಸಿಕೊಂಡು ಅತ್ಯದ್ಭುತ ಸಾಧನೆ ಮಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಕುಕ್ಕುಜೆ ಶಾಲೆಯು ಅತಿಥಿ ಶಿಕ್ಷಕರ ನೆಲೆಯಲ್ಲಿನ ಪಿಯುಸಿಯಲ್ಲಿ ಶೇ 100 ಫಲಿತಾಂಶ ಪಡೆದಿರುವುದು ಶ್ಲಾಘನೀಯ. ಈ ಫಲಿತಾಂಶದಲ್ಲಿ ಅಧ್ಯಾಪಕರ ತಂಡದ ಶ್ರಮಕ್ಕೆ ಸುನಿಲ್ ಕುಮಾರ್ ಅಭಿನಂದಿಸಿ, ಶಾಲೆಗೆ ಬೇಕಾದ ಸಭಾಭವನವು ಮಂಜೂರೂಗೊಳಿಸುವುದಾಗಿ ಅವರು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಚಿಲಿಪಿಲಿ ಎನ್ನುವ ಮಕ್ಕಳ ಸಾಹಿತ್ಯ ಕಲರವ ಎನ್ನುವ ಇ-ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಭುವನೇಂದ್ರ ಕಾಲೇಜು ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೂಕ್ತ ಅವಕಾಶ ಹಾಗೂ ವೇದಿಕೆ ಸಿಕ್ಕಾಗ ಮಕ್ಳಳಲ್ಲಿನ ಸುಪ್ತ ಪ್ರತಿಭೆಗಳು ಅನಾವರಣಗೊಳ್ಳುತ್ತದೆ ಎನ್ನುವುದಕ್ಕೆ ಕುಕ್ಕುಜೆ ಶಾಲೆಯ ವಿದ್ಯಾರ್ಥಿಗಳೇ ಸಾಕ್ಷಿ. ಸರ್ಕಾರಿ ಶಾಲೆಯಲ್ಲಿ ಇಂತಹ ಪ್ರತಿಭೆಗಳು ರಾಷ್ಟçಮಟ್ಟದ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಹೆಗ್ಡೆ, ಎಸ್ಡಿಎಂಸಿ ಅಧ್ಯಕ್ಷ ದಿನೇಶ್ ನಾಯ್ಕ್, ಪ್ರಾಂಶುಪಾಲ ರಮೇಶ್ ನಾಯ್ಕ್, ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಶೆಟ್ಟಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಬಾಬುರಾಯ ಕಾಮತ್, ಸರಿತಾ ಮುಂತಾದವರು ಉಪಸ್ಥಿತರಿದ್ದರು.
ಆವಿಷ್ಕಾರದ ಪ್ರಮುಖ ರೂವಾರಿ ಸಮಾಜ ವಿಜ್ಞಾನ ಶಿಕ್ಷಕ ಸುರೇಶ್ ಮರಕಾಲ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಇಂತಹ ಅಪೂರ್ವ ಸಾಧನೆಗೆ ಎಲ್ಲಾ ಶಿಕ್ಷಕ ಹಾಗೂ ಪೋಷಕ ವೃಂದ ಹಾಗೂ ಆಡಳಿತ ವರ್ಗದ ಸಾಂಘಿಕ ಪ್ರಯತ್ನವೇ ಕಾರಣ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಯಾನಂದ ಹೆಗ್ಡೆ ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ನಡುವೆ ವಿದ್ಯಾರ್ಥಿಗಳು ಆವಿಷ್ಕರಿಸಿದ ಮಾದರಿಗಳ ಕಿರು ವಿಡಿಯೋ ಚಿತ್ರವನ್ನು ಪ್ರಸ್ತುತಪಡಿಸಲಾಯಿತು.