ಬೆಂಗಳೂರು: ಮುಂಗಾರು ಚುರುಕುಕೊಂಡ ಬೆನ್ನಲ್ಲೇ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಕರಾವಳಿ ಹಾಗೂ ಮಲೆನಾಡು ಭಾಗದ ಬಹುತೇಕ ಜಿಲ್ಲೆಗಳಲ್ಲಿ ಜೂನ್ 23ರಿಂದ ಭಾರಿ ಮಳೆಯಾಗಲಿದೆ. ಹೀಗಾಗಿ ಜೂನ್ 25ರ ವರೆಗೆ ಕರಾವಳಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಇದೇ ವೇಳೆ ಧಾರವಾಡ, ಹಾವೇರಿ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು ಹಾಗೂ ಶಿವಮೊಗ್ಗದಲ್ಲಿ ಜೂ.24ರಂದು ಭಾರಿ ಮಳೆ ಸಾಧ್ಯತೆ ಇದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಾಗವಿ ಸೇರಿದಂತೆ ಉತ್ತರ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಪೈಕಿ ಕರಾವಳಿ ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆಯಾಗಲಿದೆ. ಈ ಬಾರಿ ಮುಂಗಾರು ಪ್ರವೇಶ ಕೊಂಚ ಬೇಗವಾಗಿದ್ದರೂ ಜೂನ್ ತಿಂಗಳಲ್ಲಿ ಮಳೆ ಕೊರತೆ ಕಾಡಲಿದೆ ಎಂದು ಇಲಾಖೆ ಸೂಚಿಸಿದೆ. ದೇಶದಲ್ಲಿ ಸರಾಸರಿ ಮಳೆ ಪ್ರಮಾಣದಲ್ಲಿ ಶೇಕಡಾ 20 ರಷ್ಟು ಕೊರತೆಯಾಗಿದೆ ಎಂದು ಹಾವಾಮಾನ ಇಲಾಖೆ ಹೇಳಿದೆ. ಜೂ.1ರಿಂದ 18ರೊಳಗೆ 64.5 ಮಿ.ಮೀ ಮಳೆಯಾಗುವ ಮೂಲಕ ಶೇ.20ರಷ್ಟು ಕೊರತೆಯಾಗಿದೆ. ಉತ್ತರ ಭಾರತದ ಹಲವೆಡೆ ಸರಾಸರಿಗಿಂತ ಕಡಿಮೆ ಮಳೆಯಾಗಿದೆ. ಆದರೆ ದಕ್ಷಿಣ ಭಾರತದಲ್ಲಿ 106.6 ಮಿ.ಮೀ ಮಳೆಯಾಗುವ ಮೂಲಕ ಶೇ.16ರಷ್ಟು ಅಧಿಕ ಮಳೆಯಾಗಿದೆ.











