ಮಂಗಳೂರು: ಕಡಬ ತಾಲೂಕಿನ ಕುಂತೂರಿನಲ್ಲಿ ಸರಕಾರಿ ಶಾಲೆಯ ಕೊಠಡಿಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕುಂತೂರು ಸರಕಾರಿ ಶಾಲೆಯ ಕೊಠಡಿಯ ಮೇಲ್ಛಾವಣಿ ಹಾಗೂ ಗೋಡೆ ಏಕಾಏಕಿ ಕುಸಿದಿದ್ದು, ಅವಘಡದ ವೇಳೆ ಹೆಚ್ಚಿನ ವಿದ್ಯಾರ್ಥಿಗಳು ತರಗತಿ ಕೊಠಡಿಯಿಂದ ಹೊರಗಡೆ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಾಲ್ವರು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಫಾತಿಮತ್ ಸುಹಾನ, ರಶ್ಮಿ, ದೀಕ್ಷೀತಾ ಹಾಗೂ ಯಶ್ಮಿತಾ ಎಂಬುವವರಿಗೆ ಗಾಯಾವಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಪೋಷಕರು ಶಾಲೆಗೆ ದೌಡಾಯಿಸಿದ್ದಾರೆ.
ಈ ಘಟನೆ ಸಂಬಂಧಪಟ್ಟಂತೆ ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಕುಂತೂರು ಹಾಗೂ ಫೀಲ್ಡ್ ಇಂಜಿನಿಯರ್ನನ್ನು ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ವಿಪತ್ತು ಪರಿಹಾರ ನಿಧಿಯಲ್ಲಿ ಶಾಲೆ ರಿಪೇರಿಗೆ ಹಣ ಬಂದಿತ್ತು. ಈ ಹಿನ್ನಲೆ ಶಾಲೆಯಲ್ಲಿ ಮಕ್ಕಳನ್ನಿರಿಸಿಕೊಂಡು ರಿಪೇರಿ ಕಾರ್ಯ ಮಾಡುತ್ತಿದ್ದು, ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.










`
